ಮಾಸ್ಕ್ ಧರಿಸಿದರೆ ವೈರಾಣು ಸೋಂಕಿನ ಹೆಚ್ಚಿನ ಅಪಾಯವಿದೆ !
ಲಂಡನ್ : ಜಗತ್ತಿನಾದ್ಯಂತ ಕೊರೋನ ವೈರಸ್ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಜನರು ಸೋಂಕು ತಗಲದಂತೆ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಮುಖಕ್ಕೆ ಮಾಸ್ಕ್ ಹಾಕುವುದರಿಂದ ವಾಸ್ತವವಾಗಿ ಸೋಂಕು ತಗಲುವ ಹೆಚ್ಚಿನ ಅಪಾಯವಿದೆ ಎಂದು ಇಂಗ್ಲೆಂಡ್‍ನ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಜೆನ್ನಿ ಹ್ಯಾರಿಸ್ ಹೇಳಿದ್ದಾರೆ.
ಮುಖಕ್ಕೆ ಮಾಸ್ಕ್ ಹಾಕುವುದರಿಂದ ವೈರಾಣು ಅದರೊಳಗೇ ಇದ್ದುಕೊಂಡು ಅದನ್ನು ಧರಿಸಿದವರು ಉಸಿರಾಡುವಾಗ ಅವರ ದೇಹದೊಳಗೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.
''ಹೆಚ್ಚಿನವರ ಬಳಿ ಒಂದೇ ಮಾಸ್ಕ್ ಇರುತ್ತದೆ. ಅವರು ಅದನ್ನು ಧರಿಸಿ ತೆಗೆದ ನಂತರ ಇಟ್ಟ ಸ್ಥಳದಲ್ಲೂ ವೈರಾಣುಗಳಿರಬಹುದು ಅಥವಾ ಹೊರಗೆ ಹೋದಾಗ ಅವರು ಕೈತೊಳೆಯದೆ ಕಾಫಿ ಕಪ್ ಕೈಯ್ಯಲ್ಲಿ ಹಿಡಿದುಕೊಂಡು ಮಾಸ್ಕ್ ಬದಿಗೆ ಸರಿಸಿ ಕಾಫಿ ಕುಡಿಯಬಹುದು, ಇಂತಹ ಸಂದರ್ಭದಲ್ಲೂ ವೈರಾಣು ಅವರ ದೇಹ ಪ್ರವೇಶಿಸಬಹುದು, ವೈದ್ಯರು ಸೂಚಿಸದ ಹೊರತು ಮಾಸ್ಕ್ ಧರಿಸುವ ಅಗತ್ಯವಿಲ್ಲ'' ಎಂದೂ ಅವರು ತಿಳಿಸಿದ್ದಾರೆ.
ಕೊರೋನ ವೈರಸ್ ಲಕ್ಷಣಗಳನ್ನು ಹೊಂದಿರುವವರಿಂದ ಗರ್ಭಿಣಿಯರು ದೂರವಿರಬೇಕು ಹಾಗೂ ಒಮ್ಮೆ ಈ ವೈರಾಣು ಸೋಂಕಿಗೆ ಒಳಗಾದವರು ಮತ್ತೆ ಈ ಸೋಂಕಿಗೊಳಗಾಗುವುದು ವಿರಳ ಎಂದಿದ್ದಾರೆ.