×
Ad

ಎಡಿಆರ್ ಕೇಂದ್ರದಿಂದ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ : ನ್ಯಾ. ಅಬ್ದುಲ್ ನಝೀರ್

Update: 2020-03-14 20:02 IST

ಮಂಗಳೂರು, ಮಾ.14: ನ್ಯಾಯಾಲಯಗಳಿಗೆ ಪರ್ಯಾಯ ವ್ಯಾಜ್ಯ ಪರಿಹಾರ (ಎಡಿಆರ್) ಕೇಂದ್ರಗಳು ಪರ್ಯಾಯವಲ್ಲದಿದ್ದರೂ ಕೂಡ ನ್ಯಾಯಾಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಇದು ತುಂಬಾ ಸಹಕಾರಿಯಾಗಿವೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ ಎಸ್.ಅಬ್ದುಲ್ ನಝೀರ್ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಕೆಸಿಸಿಐ ವತಿಯಿಂದ ಆರಂಭಿಸಲಾದ ‘ಎಡಿಆರ್’ (ಪರ್ಯಾಯ ವ್ಯಾಜ್ಯ ಪರಿಹಾರ) ಕೇಂದ್ರ ಮತ್ತು ವೆಬ್‌ಸೈಟ್, ಇ-ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಉದ್ಯಮಗಳು ಏರುತ್ತಿದೆ. ವ್ಯಾಜ್ಯಗಳು ಕೂಡ ಹೆಚ್ಚುತ್ತಿವೆ. ಇದರಿಂದ ನ್ಯಾಯಾಲಯಗಳ ಮೇಲೆ ಒತ್ತಡವೂ ಅಧಿಕವಾಗುತ್ತಿದೆ. ಆದರೆ ವ್ಯಾಜ್ಯಗಳ ಸಂಖ್ಯೆಗೆ ಹೋಲಿಸಿದರೆ ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯಗಳು ಹಾಗೂ ನ್ಯಾಯಾಧೀಶರ ಕೊರತೆ ಇರುವುದರಿಂದ ಅನೇಕ ಪ್ರಕರಣಗಳು ಬಾಕಿ ಉಳಿಯುತ್ತದೆ. ಇಂತಹ ಸಂದರ್ಭದಲ್ಲಿ ವ್ಯಾಜ್ಯಗಳನ್ನು ಮಧ್ಯವರ್ತಿಯ ಮುಖಾಂತರ ಪರಿಹಾರಗೊಳಿಸುವಲ್ಲಿ ಎಡಿಆರ್ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ನ್ಯಾ.ಅಬ್ದುಲ್ ನಝೀರ್ ಹೇಳಿದರು.

ನ್ಯಾಯಾಲಯಗಳಿಗೆ ಬರುತ್ತಿರುವ ವ್ಯಾಜ್ಯಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರೆ, ನ್ಯಾಯಾಂಗ ವ್ಯವಸ್ಥೆಯಿಂದ ಜನರು ಕೂಡ ಹೊರಗಿರು ವಂತಹ (ಡೊಕೆಟ್ ಎಕ್ಸ್‌ಕ್ಲೂಶನ್) ಪರಿಸ್ಥಿತಿಯೂ ದೊಡ್ಡ ಸಮಸ್ಯೆಯಾಗಿ ಸಮಾಜವನ್ನು ಕಾಡುತ್ತಿದೆ. ನ್ಯಾಯ ವ್ಯವಸ್ಥೆಯ ಕುರಿತ ಅಜ್ಞಾನದಿಂದ ಜನರು ಬಳಲುತ್ತಿದ್ದಾರೆ. ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಅನೇಕ ಭಾಗಗಳಲ್ಲಿ ಈ ಪರಿಸ್ಥಿತಿಯಿದೆ. ಜನರು ಹಕ್ಕುಗಳ ಕುರಿತು ಮಾಹಿತಿ ತಿಳಿದುಕೊಳ್ಳಬೇಕು ಮತ್ತು ಎಲ್ಲರಿಗೂ ಸೂಕ್ತ ನ್ಯಾಯ ದೊರೆಯಬೇಕಿದೆ ಎಂದು ನ್ಯಾಯಾಧೀಶ ಎಸ್.ಅಬ್ದುಲ್ ನಝೀರ್ ನುಡಿದರು.

ಕ್ಯಾನ್ಸರ್‌ನಂತೆ ಸಿವಿಲ್ ವ್ಯಾಜ್ಯ: ಸಿವಿಲ್ ವ್ಯಾಜ್ಯಗಳು ಕ್ಯಾನ್ಸರ್‌ನಂತೆ ವೃದ್ದಿಸುತ್ತಿವೆ. ಲೀಗಲ್ ನೋಟಿಸ್‌ನಿಂದ ಆರಂಭಗೊಂಡು ಲಿಖಿತ ಹೇಳಿಕೆಗಳು, ರಿಟ್, ಎಸ್‌ಎಲ್‌ಪಿ, ರಿಮಾಂಡ್ ಆರ್ಡರ್, ಅಪೀಲು ಇತ್ಯಾದಿ ಪ್ರಕ್ರಿಯೆಗಳು ಆಗುವಾಗ 20-30 ವರ್ಷಗಳೇ ಕಳೆಯುತ್ತವೆ. ಜಿಲ್ಲಾ ನ್ಯಾಯಾಲಯಗಳು ನೀಡುವ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಬರುತ್ತಾರೆ. ಇಷ್ಟಾಗುವಾಗ ಸಮಯ, ವಿಪರೀತ ಹಣ ವ್ಯಯವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ವ್ಯಾಜ್ಯ ಪರಿಹಾರ ಕೇಂದ್ರಗಳು ಅತಿ ಕಡಿಮೆ ಸಮಯ ಮತ್ತು ಉಳಿತಾಯದಲ್ಲಿ ಪರಿಹಾರ ಒದಗಿಸಲಿದೆ ಎಂದು ನ್ಯಾ. ಅಬ್ದುಲ್ ನಝೀರ್, ಹೇಳಿದರು.

ಪ್ರಕರಣಗಳಲ್ಲಿ ವಾದ ನಡೆಸುವ ವಕೀಲರುಗಳು ಶಾಂತಿ ಸ್ಥಾಪಕರಂತೆ ವರ್ತಿಸಬೇಕಾಗುತ್ತದೆ. ಅದಕ್ಕಾಗಿ ಮಹಾತ್ಮಾ ಗಾಂಧೀಜಿ ಸಿದ್ಧಾಂತ ಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ ನ್ಯಾ. ಅಬ್ದುಲ್ ನಝೀರ್, ಎಡಿಆರ್ ಕೇಂದ್ರಗಳು ಕೈಗೆತ್ತಿಕೊಳ್ಳಬಹುದಾದ ಪ್ರಕರಣಗಳು, ನ್ಯಾಯಾಲಯಗಳಲ್ಲಿ ಪರಿಹಾರಗೊಳ್ಳಬೇಕಾದ ಪ್ರಕರಣಗಳ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್, ಉಪಾಧ್ಯಕ್ಷ ಶಶಿಧರ್ ಪೈ ಮಾರೂರು, ಪದಾಧಿಕಾರಿಗಳಾದ ನಿಸಾರ್ ಫಕೀರ್ ಮುಹಮ್ಮದ್, ಗಣೇಶ್ ಕಾಮತ್ ಉಪಸ್ಥಿತರಿದ್ದರು.

ಹಿರಿಯ ನ್ಯಾಯವಾದಿ ಮತ್ತು ಎಡಿಆರ್ ಉಪ ಸಮಿತಿಯ ಅಧ್ಯಕ್ಷ ವಿವೇಕಾನಂದ ಪನಿಯಾಲ ನ್ಯಾ.ಅಬ್ದುಲ್ ನಝೀರ್ ಅವರನ್ನು ಸಭೆಗೆ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ನ್ಯಾ.ನಝೀರ್‌ರ ಪತ್ನಿ ಶಮೀರಾ ಅಬ್ದುಲ್ ನಝೀರ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.

ಬಿಗಿ ಭದ್ರತೆ: ಅಯೋಧ್ಯೆ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಪೀಠದಲ್ಲಿದ್ದ ನ್ಯಾ.ಅಬ್ದುಲ್ ನಝೀರ್ ಅವರಿಗೆ ಝಡ್ ದರ್ಜೆಯ ಭದ್ರತೆ ಒದಗಿಸಲಾಗಿತ್ತು.ಆ ಹಿನ್ನೆಲೆಯಲ್ಲಿ ಶನಿವಾರ ನ್ಯಾಯಾಧೀಶರ ಸುಗಮ ಸಂಚಾರಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮುಸ್ಲಿಮರಲ್ಲಿ ವೈವಾಹಿಕ ವ್ಯಾಜ್ಯ ಕಡಿಮೆ

ತ್ರಿವಳಿ ತಲಾಕ್ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಕುರಿತು ಉಲ್ಲೇಖಿಸಿ ಮಾತನಾಡಿದ ನ್ಯಾ. ಅಬ್ದುಲ್ ನಝೀರ್ ಇಸ್ಲಾಮ್‌ನಲ್ಲಿ ಹಿರಿಯರ ಸಮಕ್ಷಮದಲ್ಲಿ ಒಂದು ತಲಾಕ್ ಹೇಳಿ, ಮತ್ತೊಂದು ತಲಾಕ್ ಹೇಳಲು ಒಂದು ತಿಂಗಳು ಕಳೆಯಬೇಕು. ಅನಂತರ ಒಂದು ತಿಂಗಳು ಬಿಟ್ಟು ಮೂರನೇ ತಲಾಕ್ ಹೇಳಬೇಕು. ಈ ನಡುವೆ ಕೆಲವೊಮ್ಮೆ ರಾಜಿಯೂ ಆಗುತ್ತದೆ. ತಲಾಕ್‌ಗಳ ಮಧ್ಯೆ ಸಮಯ ನೀಡುವ ಕಾರಣ ವಿವೇಚನೆಗೆ ಅವಕಾಶ ಸಿಗುತ್ತದೆ. ಆ ಕಾರಣಕ್ಕಾಗಿಯೇ ಮುಸ್ಲಿಮರಲ್ಲಿ ವೈವಾಹಿಕ ಮೊಕದ್ದಮೆಗಳು ಕಡಿಮೆ ಇವೆ. ಅದಕ್ಕಾಗಿಯೇ ಎಲ್ಲಾ ವೈವಾಹಿಕ ವಿಚ್ಛೇದನ ನೀಡಲು ಕನಿಷ್ಠ ಆರು ತಿಂಗಳ ಸಮಯವನ್ನು ಕಡ್ಡಾಯ ಮಾಡಲಾಗಿದೆ ಎಂದು ವಿಶ್ಲೇಷಿಸಿದರು.

1986ರ ಮುಸ್ಲಿಂ ಮಹಿಳಾ ರಕ್ಷಣಾ ಕಾಯ್ದೆಯನ್ನು ಆಗ ಹಿರಿಯ ನ್ಯಾಯಮೂರ್ತಿಯೊಬ್ಬರು, ಇದು ಮುಸ್ಲಿಂ ಪುರುಷರ ರಕ್ಷಣಾ ಕಾಯ್ದೆ ಎಂದು ತಮಾಷೆ ಮಾಡುತ್ತಿದ್ದರು ಎಂದು ಉಲ್ಲೇಖಿಸಿದ ಅವರು, ಎಲ್ಲ ವ್ಯಾಜ್ಯಗಳು ಮಧ್ಯಸ್ಥಿಕೆ ಮೂಲಕ ಬಗೆಹರಿಯುವುದಿಲ್ಲ. ಹೀಗಾಗಿಯೇ ಅಯೋಧ್ಯಾ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಬೇಕಾಯಿತು ಎಂದು ನೆನಪಿಸಿಕೊಂಡರು.

ತನ್ನ 20 ವರ್ಷಗಳ ವಕೀಲಿ ವೃತ್ತಿಯಲ್ಲಿ ಎಷ್ಟೋ ಪ್ರಕರಣಗಳನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಿದ್ದೇನೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದನ್ನು ಉಲ್ಲೇಖಿಸಿದ ಅವರು ವಕೀಲರು ಶಾಂತಿದೂತರಾಗಿರಬೇಕು. ಸಹಬಾಳ್ವೆಯ ನ್ಯಾಯ ಸಿಗುವಂತೆ ಮಾಡಬೇಕು ಎಂದು ಸಲಹೆ ನೀಡಿದ ನ್ಯಾ. ಅಬ್ದುಲ್ ನಝೀರ್, ದ.ಕ.ದಲ್ಲಿ ತೀರ್ಪು ನೀಡುವುದು ಸ್ವಲ್ಪಕಷ್ಟಕರ. ಏಕೆಂದರೆ ಇಲ್ಲಿನ ಪ್ರಕರಣಗಳು ಬಹುತೇಕ ಕೊನೆಗೊಳ್ಳುವುದು ಸುಪ್ರೀಂ ಕೋರ್ಟ್‌ನಲ್ಲಿ ಎಂದು ಹಾಸ್ಯ ಚಟಾಕಿ ಹಾರಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News