ಮಂಗಳೂರು: ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಅಂಗಾಂಗ ದಾನ

Update: 2020-03-14 15:13 GMT

ಮಂಗಳೂರು, ಮಾ.14: ನಗರದ ಬಿಜೈ ಕೆಎಸ್ಸಾರ್ಟಿಸಿ ಜಂಕ್ಷನ್ ಬಳಿ ಬಸ್ ಮತ್ತು ಬೈಕ್ ಮಧ್ಯೆ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ರಾಮನಗರ ಜಿಲ್ಲೆಯ ರಾಮನಗರ ನಿವಾಸಿ ಕುಶಾಲ್ ಕುಮಾರ್ (19) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ಮಧ್ಯೆ ಮೃತ ವಿದ್ಯಾರ್ಥಿಯ ಅಂಗಾಂಗವನ್ನು ದಾನ ಮಾಡಲಾಗಿದೆ.

ಗುರುವಾರ ಬೆಳಗ್ಗೆ ಕುಶಾಲ್ ತನ್ನ ಪಿಜಿಯಿಂದ ಬೈಕ್‌ನಲ್ಲಿ ಲಾಲ್‌ಭಾಗ್ ಕಡೆಗೆ ತೆರಳುತ್ತಿದ್ದಾಗ ಬಿಜೈ ಕೆಎಸ್ಸಾರ್ಟಿಸಿ ಜಂಕ್ಷನ್‌ನಲ್ಲಿ ಕೆಎಸ್ಸಾರ್ಟಿಸಿ ಡಿಪೋದಿಂದ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದಿತ್ತು. ಇದರಿಂದ ಕುಶಾಲ್‌ರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿತ್ತು. ತಕ್ಷಣ ಸ್ಥಳೀಯರು ಕುಶಾಲ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಶಾಲ್ ಮೃತಪಟ್ಟಿದ್ದಾರೆ.

ಅಂಗಾಂಗ ದಾನ: ಕುಶಾಲ್‌ರ ಕುಟುಂಬ ಅಪಘಾತದ ಮಾಹಿತಿ ತಿಳಿದ ತಕ್ಷಣ ಮಂಗಳೂರಿಗೆ ಆಗಮಿಸಿತ್ತು. ಕುಶಾಲ್ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಹೇಳಿದ ಬಳಿಕ ಆತನ ಕುಟುಂಬವು ಅಂಗಾಂಗ ದಾನ ಮಾಡಲು ನಿರ್ಧರಿಸಿತ್ತು.

ಅದರಂತೆ ಬೆಂಗಳೂರಿನಿಂದ ವೈದ್ಯರ ತಂಡ ಶುಕ್ರವಾರ ರಾತ್ರಿ ಮಂಗಳೂರಿಗೆ ಆಗಮಿಸಿ ಶಸ್ತ್ರಚಿಕಿತ್ಸೆ ನಡೆಸಿ ಎರಡು ಕಿಡ್ನಿ, ಲಿವರ್, ಹೃದಯ, ಶ್ವಾಸಕೋಶ, ಕಣ್ಣುಗಳನ್ನು ತೆಗೆದು ಬೆಂಗಳೂರಿಗೆ ರವಾನಿಸಿದೆ. ಅಂಗಾಂಗ ದಾನ ಪ್ರಕ್ರಿಯೆ ಮುಗಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಯಿತು.

ಶನಿವಾರ ಮಧ್ಯಾಹ್ನ ಮೃತದೇಹ ರಾಮನಗರಕ್ಕೆ ಕೊಂಡೊಯ್ಯಲಾಯಿತು. ಮೃತ ಕುಶಾಲ್ ತಂದೆ, ತಾಯಿ, ಸಹೋದರಿಯರನ್ನು ಅಗಲಿದ್ದಾರೆ. ನಗರದ ಪಾಂಡೇಶ್ವರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News