ಕೊರೋನ ಎಫೆಕ್ಟ್: 3 ದಿನಗಳ ರಂಗಭೂಮಿ ನಾಟಕೋತ್ಸವ ರದ್ದು
ಉಡುಪಿ, ಮಾ.14: ರಂಗಭೂಮಿ ಉಡುಪಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಮಾ.17ರಿಂದ 19ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಿದ್ದ ಮೂರು ದಿನಗಳ ಮೈಸೂರು ರಂಗಾಯಣದ ಸಂಚಾರಿ ರಂಗ ಘಟಕದ ರಂಗ ಸಂಚಾರ -2019-20 ನಾಟಕೋತ್ಸವನ್ನು ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ರದ್ದುಪಡಿಸ ಲಾಗಿದೆ ಎಂದು ರಂಗಭೂಮಿಯ ಪ್ರಕಟಣೆ ತಿಳಿಸಿದೆ.
ಆದರೆ ಮಾ.27 ಮತ್ತು 28ರಂದು ‘ವಿಶ್ವ ರಂಗಭೂಮಿ ದಿನಾಚರಣೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಿಗದಿಪಡಿಸಿದಂತೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೊಗೇರ ಸಮ್ಮೇಳನ: ಉಡುಪಿ ಜಿಲ್ಲಾ ಮೊಗೇರ ಸಂಘದ ವತಿಯಿಂದ ಮಾ.15ರ ಬೆಳಗ್ಗೆ 10ರಿಂದ ಕಾರ್ಕಳ ಅತ್ತೂರಿನ ಚರ್ಚ್ ಹಾಲ್‌ನಲ್ಲಿ ನಡೆಯಬೇಕಿದ್ದ ಮೊಗೇರ ಸಮ್ಮೇಳನವನ್ನು ಮುಂದೂಡಿುವುದಾಗಿ ಸಂಘದ ಪ್ರಕಟಣೆ ತಿಳಿಸಿದೆ.
ರಕ್ತದಾನದ ಮೇಲೆ ಕೊರೋನ ವೈರಸ್ ಪ್ರಭಾವ
ಕೊರೋನ ವೈರಸ್‌ನ ಎಫೆಕ್ಟ್ ಇದೀಗ ರಕ್ತದಾನದ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ. ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮವಾಗಿ ನಿಗದಿತ ರಕ್ತದಾನ ಶಿಬಿರಗಳನ್ನು ಇದೀಗ ರದ್ದು ಪಡಿಸಲಾಗಿದೆ.
ಇದರಿಂದ ರಕ್ತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದರೂ ಆಸ್ಪತ್ರೆಗಳಲ್ಲಿ ರಕ್ತದ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಿ ಅಗತ್ಯವಿರುವವರಿಗೆ ಸಹಾಯ ಮಾಡಲು ಆರೋಗ್ಯವಂತ ಸಾರ್ವಜನಿಕರು ರಕ್ತದಾನ ಮಾಡಲು ಮುಂದಾಗುವಂತೆ ಮಣಿಪಾಲದ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಮನವಿ ಮಾಡಿದೆ.
ರಕ್ತದಾನ ಸುರಕ್ಷಿತ ವಿಧಾನವಾಗಿದ್ದು, ರಕ್ತ ಮತ್ತು ರಕ್ತದ ಅಂಶಗಳು ಅಗತ್ಯವಿ ರುವ ರೋಗಿಗಳಿಗೆ ಸಹಾಯ ಮಾಡಲು ಜನರು ಮುಂದೆ ಬರುವಂತೆ ಅದು ತಿಳಿಸಿದೆ. ಕೆಎಂಸಿ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ ನೆಲ ಮಹಡಿಯಲ್ಲಿರುವ ರಕ್ತನಿಧಿ ಕೇಂದ್ರದಲ್ಲಿ ಬೆಳಗ್ಗೆ 7:00ರಿಂದ ಸಂಜೆ 7:00 ರವರೆಗೆ ರಕ್ತದಾನ ಮಾಡುವ ಮೂಲಕ ರೋಗಿಗಳ ಜೀವ ಉಳಿಸಲು ಸಹಾಯ ಮಾಡುವಂತೆ ಅವರು ಮನವಿ ಮಾಡಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0820-2922331ಕ್ಕೆ ಕರೆ ಮಾಡುವಂತೆ ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪವರ್‌ಲಿಫ್ಟಿಂಗ್ ಸ್ಪರ್ಧೆ: ಉಡುಪಿಯಲ್ಲಿ ಮಾ.16ರಂದು ನಡೆಯಬೇಕಿದ್ದ, ಮಂಗಳೂರು ವಿವಿಯ ಅಂತರ ಕಾಲೇಜು ಪುರುಷರ ಪವರ್‌ಲಿಪ್ಟಿಂಗ್ ಸ್ಪರ್ಧೆಗಳನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.