ದಾಖಲೀಕರಣಗೊಂಡ ಮರಾಟಿ ಜನಾಂಗದ ಹೋಳಿ ಆಚರಣೆ
ಉಡುಪಿ, ಮಾ.14: ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ ಹಲವು ಕಡೆಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮರಾಟಿ (ನಾಯ್ಕ) ಜನಾಂಗ ತಲೆತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಹೋಳಿ ಆಚರಣೆಯ ದಾಖಲೀಕರಣ ಇತ್ತೀಚೆಗೆ ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿರುವ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯ ಕೇಂದ್ರದ ವತಿಯಿಂದ ನಡೆಯಿತು.
ಹೋಳಿ ಹುಣ್ಣಿಮೆಯ ಮೊದಲ ಏಕಾದಶಿಯಂದು ಆರಂಭಗೊಳ್ಳುವ ಈ ವಿಶಿಷ್ಟ ರಂಗುರಂಗಿನ ಹೋಳಿ ಹಬ್ಬ, ಹಲವು ಕಡೆ ಹುಣ್ಣಿಮೆಗೆ ಕೊನೆಯಾದರೆ, ಕೆಲಭಾಗಗಳಲ್ಲಿ ಹುಣ್ಣಿಮೆಯ ಪಾಡ್ಯಕ್ಕೆ ಹೋಳಿಹಬ್ಬ ಕೊನೆಗೊಳ್ಳುವುದು. ಮೂಲ ಸಂಪ್ರದಾಯ ಕಣ್ಮರೆಯಾಗುತ್ತಿರುವ, ನೆನಪಿನಿಂದ ಮಾಸುತ್ತಿರುವ ಅಥವಾ ಬದಲಾವಣೆ ಹೊಂದುತ್ತಿರುವ ಜನಪದ ಕಲೆಯಾದ ಹೋಳಿ ಹಬ್ಬವನ್ನು ಇಲ್ಲೊಂದು ಊರಿನಲ್ಲಿ ವಿಶಿಷ್ಠ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ.
ಕುಂದಾಪುರ ತಾಲೂಕಿನ ಅಂಪಾರು, ಮೂಡುಬಗೆ ಕೆರೆಮನೆ ಗುರಿಕಾರ ರಾದ ಶಿವರಾಮ ನಾಯ್ಕಾ ಇವರ ನೇತೃತ್ವದಲ್ಲಿ ಹತ್ತು ಸಮಸ್ತರ ಕಟ್ಟೆಯಲ್ಲಿ ಅರ್ಚಕ, ಪಾತ್ರಿ ಶಂಕರ ನಾಯ್ಕಿ ಹಾಗೂ ಆನಂದ ನಾಯ್ಕಿ ಇವರ ಸಂದರ್ಶನ ನಡೆಸಲಾಯಿತು.
ಹೋಳಿ ಹಬ್ಬದ ಆಚರಣೆ, ಅದರ ವೈಶಿಷ್ಟ್ಯತೆ, ಆಚಾರ-ವಿಚಾರ, ಗುಮಟೆ ಹಾಡು, ಕೋಲಾಟದ ಹಾಡುಗಳನ್ನು ದಾಖಲಿಸಿಕೊಳ್ಳಲಾಯಿತು. ಇದೇ ಸಮಯದಲ್ಲಿ ಗಿರಿಜಾ ನಾಯ್ಕಿ ಅವರು ಹಾಡಿದ ಸಂಪ್ರದಾಯದ ಮದುವೆ ಹಾಡನ್ನು ಸಹ ಮಾಹೆ ಆಡಳಿತಕ್ಕೊಳಪಟ್ಟ ಆರ್‌ಆರ್‌ಸಿ ದಾಖಲೀಕರಣ ನಡೆಸಿತು.
ಪ್ರೇಮಾ, ಸುರೇಂದ್ರ ನಾಯ್ಕೊ, ಕೃಷ್ಣ ನಾಯ್ಕೊ, ಶ್ರೀಮತಿ, ನಾರಾಯಣ ನಾಯ್ಕೊ ಹಾಗೂ ಇವರ ಮಕ್ಕಳು ಹಾಗೂ ಸಮುದಾಯದ ಹತ್ತು ಸಮಸ್ತರು ದಾಖಲೀಕರಣಕ್ಕೆ ಸಹಕಾರ ನೀಡಿದರು.
ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ ಹಿರೇಗಂಗೆ ಅವರ ಮಾರ್ಗದರ್ಶನದಲ್ಲಿ ಲಚ್ಚೇಂದ್ರ ಇವರು ಭಾರತಿಯವರ ಸಹಕಾ ದೊಂದಿಗೆ ದಾಖಲೀಕರಣ ನಡೆಸಿದರು.