ತಿರುವನಂತಪುರ: ಕಟ್ಟೆಚ್ಚರಿಕೆ ಘೋಷಿಸಿದ ಜಿಲ್ಲಾಧಿಕಾರಿ

Update: 2020-03-14 15:55 GMT

ತಿರುವನಂತಪುರ, ಮಾ. 14: ಜಿಲ್ಲೆಯಲ್ಲಿ 19 ಕೊರೋನ ಸೋಂಕಿನ ಪ್ರಕರಣಗಳು ದೃಢಪಟ್ಟಿರುವುದರಿಂದ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಕಟ್ಟೆಚ್ಚರಿಕೆ ಘೋಷಿಸಲಾಗಿದೆ.

ಬೀಚ್, ಶಾಪಿಂಗ್ ಮಾಲ್, ಜಿಮ್, ಬ್ಯೂಟಿ ಪಾರ್ಲರ್‌ಗಳನ್ನು ಮುಚ್ಚಲಾಗುವುದು. ಸಾರ್ವಜನಿಕ ಕಾರ್ಯಕ್ರಮ, ದೇವಾಲಯದ ಉತ್ಸವ, ಚರ್ಚ್ ಉತ್ಸವ, ವಿವಾಹ ಸಮಾರಂಭ ಹಾಗೂ ಇತರ ಸಾಮೂಹಿಕ ಸಭೆ ಮೇಲೆ ಕಠಿಣ ನಿರ್ಬಂಧ ಹೇರಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್ ಹೇಳಿದ್ದಾರೆ. ಇಂಗ್ಲೆಂಡ್‌ನಿಂದ ಇಲ್ಲಿಗೆ ಆಗಮಿಸಿದವರಲ್ಲಿ 37 ಮಂದಿ ‘ಕೊರೋನ ಅತಿ ಅಪಾಯಕಾರಿ ಸಂಪರ್ಕದ ಪಟ್ಟಿ’ಯಲ್ಲಿ ಸೇರಿದ್ದಾರೆ. ವಿಮಾನ ಪ್ರಯಾಣದ ವೇಳೆ ಓರ್ವ ಕೊರೋನ ಸೋಂಕಿನ ವ್ಯಕ್ತಿ ಇದ್ದ. ಇದರಿಂದ ಒಟ್ಟು 69 ಸಹ ಪ್ರಯಾಣಿಕರಲ್ಲಿ 37 ಮಂದಿ ‘ಅತಿ ಅಪಾಯಕಾರಿ ಸಂಪರ್ಕ’ದ ಪಟ್ಟಿಯಲ್ಲಿ ಸೇರಿದ್ದಾರೆ.

ರೋಗಿಯ ಸಂಬಂಧಿಕರ ಸಹಿತ ಇತರ 7 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ವರ್ಕಲದ ರಿಸೋರ್ಟ್‌ನಲ್ಲಿ ಇರುವ ಕೊರೋನ ಸೋಂಕಿತ ಇಟಲಿ ಪ್ರಜೆಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಗೋಪಾಲಕೃಷ್ಣನ್ ಹೇಳಿದರು. ನಿಗಾದಲ್ಲಿ ಇರುವ ಹಲವು ಜನರು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಅನಗತ್ಯ ಕಾರಣಕ್ಕೆ ಮನೆಯಿಂದ ಹೊರಗಿಳಿಯದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News