ಒಮರ್ ಅಬ್ದುಲ್ಲಾರನ್ನು ಭೇಟಿಯಾದ ಫಾರೂಕ್ ಅಬ್ದುಲ್ಲಾ

Update: 2020-03-14 16:00 GMT

ಶ್ರೀನಗರ, ಮಾ.14: ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಸುಮಾರು 7 ತಿಂಗಳ ಬಂಧನದ ಬಳಿಕ ಶುಕ್ರವಾರ ಬಿಡುಗಡೆಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಶನಿವಾರ ಶ್ರೀನಗರದ ಹರಿನಿವಾಸದಲ್ಲಿ ಗೃಹಬಂಧನದಲ್ಲಿರುವ ಪುತ್ರ ಒಮರ್ ಅಬ್ದುಲ್ಲಾರನ್ನು ಭೇಟಿಯಾದರು .

 ಶುಕ್ರವಾರ ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೆಯೇ ಫಾರೂಕ್ ಅಬ್ದುಲ್ಲಾ ತನ್ನ ಪುತ್ರನನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಜಮ್ಮು ಕಾಶ್ಮೀರ ಆಡಳಿತಕ್ಕೆ ಮನವಿ ಮಾಡಿದ್ದರು. ಅನುಮತಿ ದೊರೆತ ಹಿನ್ನೆಲೆಯಲ್ಲಿ ಶನಿವಾರ ಪುತ್ರನನ್ನು ಭೇಟಿಮಾಡಿದರು. ಸುಮಾರು 7 ತಿಂಗಳ ಬಳಿಕ ಇವರಿಬ್ಬರು ಭೇಟಿಯಾಗಿದ್ದು, ಪರಸ್ಪರ ಹಾರ್ದಿಕವಾಗಿ ಆಲಂಗಿಸಿಕೊಂಡರು ಎಂದು ಮೂಲಗಳು ತಿಳಿಸಿವೆ .

ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಬಂಧನಲ್ಲಿರುವ ಎಲ್ಲರನ್ನೂ ಸರಕಾರ ಬಿಡುಗಡೆ ಮಾಡಿದರೆ ಮಾತ್ರ ಸ್ವಾತಂತ್ರ್ಯ ಪರಿಪೂರ್ಣವಾಗುತ್ತದೆ . ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸಹಿತ ಎಲ್ಲರನ್ನೂ ಬಿಡುಗಡೆ ಮಾಡಲು ಸರಕಾರ ಶೀಘ್ರ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು. ಇದಕ್ಕೂ ಮೊದಲು ಶ್ರೀನಗರದ ದಾಲ್ ಸರೋವರದ ದಡದಲ್ಲಿರುವ ತನ್ನ ತಂದೆ, ರಾಜ್ಯದ ಮಾಜಿ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾರ ಸಮಾಧಿಗೆ ಫಾರೂಕ್ ಅಬ್ದುಲ್ಲಾ ಭೇಟಿ ನೀಡಿ ಗೌರವ ಸಲ್ಲಿಸಿದರು. ಈ ಸಂದರ್ಭ ಅವರ ಪತ್ನಿ ಮೋಲಿ, ಮೊಮ್ಮಗ ಅದೀಮ್ ಜತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News