ದಿಲ್ಲಿಯಲ್ಲಿ ಗುಪ್ತಚರ ಅಧಿಕಾರಿ ಹತ್ಯೆ: ಮತ್ತೆ ಐವರ ಬಂಧನ

Update: 2020-03-14 16:41 GMT

ಹೊಸದಿಲ್ಲಿ, ಮಾ. 14: ಕಳೆದ ತಿಂಗಳು ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ ಹಿಂಸಾಚಾರದ ಸಂದರ್ಭ ಗುಪ್ತಚರ ಇಲಾಖೆ ಅಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮತ್ತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ 10ರಿಂದ 12 ಮಂದಿ ಭಾಗಿಯಾಗಿದ್ದಾರೆ. ಇವರಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳನ್ನು ದಿಲ್ಲಿಯ ಫಿರೋಝ್, ಚಾಂದ್‌ಬಾಗ್‌ ನ ಜಾವೇದ್, ಅನಾಸ್‌ನ ಗಲ್ಫಾಮ್ ಹಾಗೂ ಮುಸ್ತಫಾಬಾದ್ ನ ಶುಐಬ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಕಳೆದ ವಾರ ಆರಂಭದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾನ್ ಎಂಬಾತನನ್ನು ಬಂಧಿಸಲಾಗಿತ್ತು. ಆತನಿಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಗುಪ್ತಚರ ಇಲಾಖೆಯಲ್ಲಿ ಭದ್ರತಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ 26 ವರ್ಷದ ಅಂಕಿತ್ ಶರ್ಮಾ ಅವರು ದಿಲ್ಲಿ ಹಿಂಸಾಚಾರದ ಸಂದರ್ಭ ನಾಪತ್ತೆಯಾಗಿದ್ದರು. ತಮ್ಮ ಮನೆಯಿಂದ ಅವರನ್ನು ಕರೆದೊಯ್ಯಲಾಗಿದೆ ಎಂದು ಅಂಕಿತ್ ಶರ್ಮಾ ಅವರ ಕುಟುಂಬ ಆರೋಪಿಸಿತ್ತು. ಮರುದಿನ ಹಲವು ಗಾಯಗಳಿಂದ ಕೂಡಿದ ಅಂಕಿತ್ ಶರ್ಮಾ ಅವರ ಮೃತದೇಹ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News