ಎನ್‌ಪಿಆರ್ ವಿರುದ್ಧ ನಿರ್ಣಯ ಅಂಗೀಕಾರ : ದಿಲ್ಲಿಯ ಆಪ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ

Update: 2020-03-14 16:47 GMT

ಹೊಸದಿಲ್ಲಿ, ಮಾ. 14: ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಅನುಷ್ಠಾನದ ವಿರುದ್ಧ ನಿರ್ಣಯ ಅಂಗೀಕರಿಸಿದ ದಿಲ್ಲಿಯ ಆಪ್ ಸರಕಾರದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ ಬಿಜೆಪಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದಿದೆ.

ಕೇಂದ್ರದ ಸಹಾಯಕ ಸಚಿವ ಜಿ. ಕೃಷ್ಣ ರೆಡ್ಡಿ, ಎನ್‌ಪಿಆರ್‌ಗೆ ಯಾವುದೇ ದಾಖಲೆಗಳು ಹಾಗೂ ಪ್ರಮಾಣ ಪತ್ರಗಳು ಅಗತ್ಯ ಇಲ್ಲ ಎಂದು ಹೇಳಿದ್ದಾರೆ. “ಅವರು ಜನರನ್ನು ಪ್ರಚೋದಿಸುತ್ತಿದ್ದಾರೆ. ಅಲ್ಲದೆ, ಧರ್ಮದ ಆಧಾರದಲ್ಲಿ ಜನರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸಿಎಎ ಹಾಗೂ ಎನ್‌ಪಿಆರ್ ವಿರುದ್ಧ ಅವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಸಿಎಎ, ಎನ್‌ಪಿಆರ್ ಹಾಗೂ ಸಮೀಕ್ಷೆ ಸೇರಿದಂತೆ ಯಾವುದೇ ಉಪಕ್ರಮಗಳು ಯಾವುದೇ ಧರ್ಮದ ವಿರುದ್ಧವಲ್ಲ. ಅವರು ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಬೇಕು ಹಾಗೂ ಅದರಿಂದ ಹಿಂದೆ ಸರಿಯಬೇಕು” ಎಂದು ಅವರು ಹೇಳಿದ್ದಾರೆ.

 ದಿಲ್ಲಿ ವಿಧಾನ ಸಭೆಯ 70 ಮಂದಿ ಸದಸ್ಯರಲ್ಲಿ 61 ಮಂದಿಗೆ ಜನನ ಪ್ರಮಾಣ ಪತ್ರ ಇಲ್ಲ ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ಅಲ್ಲದೆ, ಇವರನ್ನು ಬಂಧನ ಕೇಂದ್ರಗಳಿಗೆ ಕಳುಹಿಸುತ್ತಿರಾ ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ರೆಡ್ಡಿ ಅವರ ಈ ಹೇಳಿಕೆ ಹೊರಬಿದ್ದಿದೆ.

ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಹಿಂದೆ ತೆಗೆದುಕೊಳ್ಳಬೇಕು ಹಾಗೂ ಇದನ್ನು ಕಾರ್ಯರೂಪಕ್ಕೆ ತರಬಾರದು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿ ದಿಲ್ಲಿ ಸರಕಾರ ಶುಕ್ರವಾರ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು. ಆರ್ಥಿಕ ಕುಸಿತ, ನಿರುದ್ಯೋಗ, ಕೊರೋನ ಭೀತಿ ಸಂದರ್ಭ ಎಲ್ಲ ಶಕ್ತಿ ಹಾಗೂ ಸಂಪನ್ಮೂಲವನ್ನು ಭಾರತದ ಜನರ ನಿಜವಾದ ಅಗತ್ಯಕ್ಕೆ ಬಳಸದೆ ಎನ್‌ಪಿಆರ್, ಎನ್‌ಆರ್‌ಸಿಯಂತಹ ಅನಗತ್ಯ ವಿಷಯಗಳಿಗೆ ಬಳಸುವುದು ಸರಿಯಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಇದರೊಂದಿಗೆ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ನಿರ್ಣಯ ಅಂಗೀಕರಿಸಿದ ಪುದುಚೇರಿ, ಪಂಜಾಬ್, ಮಧ್ಯಪ್ರದೇಶ, ಕೇರಳ ಹಾಗೂ ಪಶ್ಚಿಮಬಂಗಾಳ ವಿಧಾನಸಭೆಗಳ ಸಾಲಿನಲ್ಲಿ ದಿಲ್ಲಿ ವಿಧಾನ ಸಭೆ ಕೂಡ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News