ಕೊರೋನವೈರಸ್ ಕುರಿತ ಚೀನಾ ಅಧಿಕಾರಿಯ ಹೇಳಿಕೆಗೆ ಅಮೆರಿಕ ಪ್ರತಿಭಟನೆ
Update: 2020-03-14 22:28 IST
ವಾಶಿಂಗ್ಟನ್, ಮಾ. 14: ನೂತನ-ಕೊರೋನವೈರಸ್ ರೋಗಾಣುಗಳನ್ನು ಅಮೆರಿಕವು ಚೀನಾದ ವುಹಾನ್‌ಗೆ ತಂದು ಬಿಟ್ಟಿದೆ ಎಂಬುದಾಗಿ ಚೀನಾದ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ‘ಹಾಸ್ಯಾಸ್ಪದ’ ಹೇಳಿಕೆಗೆ ಪ್ರತಿಭಟನೆ ಸಲ್ಲಿಸಲು ಚೀನಾದ ರಾಯಭಾರಿಯನ್ನು ಅಮೆರಿಕ ಶುಕ್ರವಾರ ಕರೆಸಿಕೊಂಡಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಚೀನಾದ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಪಿತೂರಿ ಸಿದ್ಧಾಂತದ ಬಗ್ಗೆ ಟ್ವೀಟ್ ಮಾಡಿದ ಒಂದು ದಿನದ ಬಳಿಕ, ಅಮೆರಿಕಕ್ಕೆ ಚೀನಾದ ರಾಯಭಾರಿ ಕುಯಿ ಟಿಯಂಕೈ ಅವರನ್ನು ಕರೆಸಿಕೊಂಡ ಏಶ್ಯಕ್ಕಾಗಿನ ಅಮೆರಿಕದ ಉನ್ನತ ರಾಜತಾಂತ್ರಿಕ ಡೇವಿಡ್ ಸ್ಟಿಲ್ವೆಲ್ ‘ತೀವ್ರ ಪ್ರತಿಭಟನೆ’ ಸಲ್ಲಿಸಿದರು.
‘‘ಜಾಗತಿಕ ಸಾಂಕ್ರಾಮಿಕ ರೋಗವೊಂದನ್ನು ಆರಂಭಿಸಿರುವ ಬಗ್ಗೆ ಚೀನಾದ ವಿರುದ್ಧ ಟೀಕೆಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ತನ್ನ ವಿರುದ್ಧದ ಆರೋಪಗಳಿಂದ ಜನರ ಗಮನ ಬೇರೆ ಕಡೆಗೆ ಸೆಳೆಯಲು ಚೀನಾ ಈ ತಂತ್ರ ಅನುಸರಿಸಿದೆ’’ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.