×
Ad

ಕರಿಂಜೆಯಲ್ಲಿ ಕೊರೋನಾ ನಿಗಾ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ : ಗ್ರಾಮಸ್ಥರಿಂದ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ

Update: 2020-03-14 22:43 IST

ಮೂಡುಬಿದಿರೆ : ಇಲ್ಲಿನ ಪುರಸಭಾ ವ್ಯಾಪ್ತಿಯ ಕರಿಂಜೆಯ ಖಾಸಗಿ ಕಟ್ಟಡವೊಂದರಲ್ಲಿ ಕೊರೋನಾ ವೈರಸ್ ಸೋಂಕಿತ ಶಂಕಿತರನ್ನು ಇರಿಸಲು ನಿಗಾ ಕೇಂದ್ರ ನಿರ್ಮಾಣಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು ಈ ಹಿನ್ನೆಲೆಯಲ್ಲಿ ಶನಿವಾರ ಮೂಡುಬಿದಿರೆ ತಹಶೀಲ್ದಾರ್ ಅನಿತಾಲಕ್ಷ್ಮಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ಈ ಸಂದರ್ಭ ತಹಶೀಲ್ದಾರ್ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಕರಿಂಜೆ ಗ್ರಾಮದ ತಾಕೋಡೆ ಕಜೆಬೈಲು ಎಂಬಲ್ಲಿ ಜೆರಾಲ್ಡ್ ಕ್ರಾಸ್ತಾ ಎಂಬವರಿಗೆ ಸೇರಿದ ಖಾಸಗಿ ಕಟ್ಟಡದಲ್ಲಿ ಕೊರೊನಾ ಸೋಂಕಿತರ ನಿಗಾ ಕೇಂದ್ರ ತೆರೆಯಲು ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಜೆರಾಲ್ಡ್ ಮನೆಗೆ ನಿನ್ನೆ ಮುಂಜಾನೆ ಭೇಟಿ ನೀಡಿದ್ದರು. ಇದರಿಂದ ಆತಂಕಗೊಂಡ ಸ್ಥಳೀಯರು ತಹಶೀಲ್ದಾರ್ ಅವರಿಂದ ಸ್ಪಷ್ಟನೆ ಕೇಳಿದರು. ಕೊರೊನಾ ವೈರಸ್ ಪೀಡಿತರಿಗೆ ಇಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗುವುದು ಎಂಬ ಮಾಹಿತಿ ಬಂದಿದೆ ಇದು ನಿಜನಾ ಎಂದು ಅಲ್ಲಿದ್ದ ಕೆಲವರು ಪ್ರಶ್ನಿಸಿದರು. 'ಅಂತದ್ದೇನಿಲ್ಲ, ನೀವು ಗಾಬರಿಪಡಬೇಕಾಗಿಲ್ಲ, ನಿಮ್ಮ ಸಹಕಾರ ಬೇಕು' ಎಂದು ತಹಶೀಲ್ದಾರ್ ಹೇಳಿದರು. ತಹಶಿಲ್ದಾರ್ ಉತ್ತರದಿಂದ ಅಸಮಧಾನಗೊಂಡ ಗ್ರಾಮಸ್ಥರು ಯಾವುದೇ ಕಾರಣಕ್ಕೆ ಕೊರೊನಾ ಸೋಂಕಿತರಿಗೆ ಈ ಕಟ್ಟಡವನ್ನು ಬಳಕೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಗ್ರಾಮಸ್ಥರ ಗದ್ದಲ ತೀವ್ರಗೊಂಡಾಗ ತಹಶೀಲ್ದಾರ್ ಅಲ್ಲಿಂದ ತೆರಳಿದ್ದು, ಗ್ರಾಮಸ್ಥರ ಒತ್ತಡಕ್ಕೆ ಮಣಿದ ತಹಶೀಲ್ದಾರ್ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News