ಕೊರೋನವೈರಸ್ ಎದುರಿಸಲು ಅಮೆರಿಕದಲ್ಲಿ ತುರ್ತು ಪರಿಸ್ಥಿತಿ

Update: 2020-03-14 17:18 GMT

 ವಾಶಿಂಗ್ಟನ್, ಮಾ. 14: ಕೊರೋನವೈರಸ್ ಸಾಂಕ್ರಾಮಿಕ ಒಡ್ಡಿದ ಆರೋಗ್ಯ ಸವಾಲನ್ನು ನಿಭಾಯಿಸುವುದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ ಹಾಗೂ ಸಾಂಕ್ರಾಮಿಕದ ವಿರುದ್ಧ ಹೋರಾಡುವುದಕ್ಕಾಗಿ 50 ಬಿಲಿಯ ಡಾಲರ್ (ಸುಮಾರು 3.69 ಲಕ್ಷ ಕೋಟಿ ರೂಪಾಯಿ) ಹಣವನ್ನು ಬಿಡುಗಡೆಗೊಳಿಸಿದ್ದಾರೆ. ಅದೇ ವೇಳೆ, ಶಂಕಿತ ರೋಗಿಗಳ ತಪಾಸಣೆ ಸಾಮರ್ಥ್ಯವನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

‘‘ಕೇಂದ್ರ ಸರಕಾರದ ಸಂಪೂರ್ಣ ಅಧಿಕಾರವನ್ನು ಚಲಾಯಿಸುವುದಕ್ಕಾಗಿ ನಾನು ಅಧಿಕೃತವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಿದ್ದೇನೆ’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

‘‘ಮುಂದಿನ ಎಂಟು ವಾರಗಳು ಅತ್ಯಂತ ಮಹತ್ವಪೂರ್ಣದ್ದಾಗಿವೆ’’ ಎಂದು ಅವರು ಹೇಳಿದರು. ‘‘ನಾವು ಕಲಿಯಬಹುದು ಹಾಗೂ ಈ ವೈರಸನ್ನು ಸೋಲಿಸುತ್ತೇವೆ’’ ಎಂದರು.

ತುರ್ತು ಶಸ್ತ್ರಚಿಕಿತ್ಸಾ ಕೇಂದ್ರಗಳನ್ನು ತೆರೆಯುವಂತೆ ಟ್ರಂಪ್ ರಾಜ್ಯಗಳಿಗೆ ಕರೆ ನೀಡಿದ್ದಾರೆ ಹಾಗೂ ವೈರಸ್‌ನ ತಪಾಸಣೆ ನಡೆಸುವ ನಮ್ಮ ಸಾಮರ್ಥ್ಯವನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುವುದಕ್ಕಾಗಿ ಖಾಸಗಿ ಕ್ಷೇತ್ರದೊಂದಿಗೆ ಸರಕಾರ ಭಾಗಿಯಾಗುತ್ತಿದೆ ಎಂದು ಹೇಳಿದರು.

ದೇಶಾದ್ಯಂತ ತಪಾಸಣಾ ಪರಿಕರಗಳ ಕೊರತೆಯಿದೆ ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News