ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್: ಚೆನ್ ಲಾಂಗ್‌ರನ್ನು ಮಣಿಸಿದ ಲೀ ಝೀ

Update: 2020-03-15 05:53 GMT

ಲಂಡನ್, ಮಾ.14: ಮಲೇಶ್ಯದ ಲೀ ಝೀ ಜಿಯಾ ಇಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಚೆನ್ ಲಾಂಗ್ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇವರ ನಡುವೆ ಕ್ವಾರ್ಟರ್ ಫೈನಲ್ ಹಣಾಹಣಿ 49 ನಿಮಿಷಗಳ ಕಾಲ ನಡೆಯಿತು.

ಝೀ ಎರಡು ಬಾರಿ ಚಾಂಪಿಯನ್ ಆಗಿರುವ ಚೀನಾದ ಚೆನ್ ಲಾಂಗ್ ಅವರನ್ನು 21-12, 21-18 ಅಂತರದಲ್ಲಿ ಮಣಿಸಿದರು. ಇದರೊಂದಿಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಚೆನ್ ಲಾಂಗ್ ಅವರ ಕನಸು ಕಮರಿ ಹೋಗಿದೆ. ಚೆನ್ 2013 ಮತ್ತು 2015ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಪ್ರಶಸ್ತಿ ಜಯಿಸಿದ್ದರು.

ಆರು ಬಾರಿ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿರುವ ಲಿನ್ ಡಾನ್‌ರನ್ನು 21-17, 21-8 ಅಂತರದಲ್ಲಿ ಮಣಿಸಿ ಅವರು ಕ್ವಾರ್ಟರ್ ಫೈನಲ್ ತಲುಪಿದ್ದರು. ಮಲೇಶ್ಯದ ಶ್ರೇಯಾಂಕರಹಿತ ಲೀ ಝೀ ಮತ್ತು ಚೆನ್ ಲಾಂಗ್ ಕಳೆದ ಅಕ್ಟೋಬರ್‌ನಲ್ಲಿ ಡೆನ್ಮಾರ್ಕ್ ಓಪನ್‌ನಲ್ಲಿ ಮುಖಾಮುಖಿಯಾಗಿದ್ದರು. 2018ರಲ್ಲಿ ಚೈನೀಸ್ ತೈಪೆ ಓಪನ್ ಬಳಿಕ ಲೀ ಮತ್ತೊಂದು ಬಿಡಬ್ಲುಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಜಯಿಸಿದ್ದರು. ಪುರುಷರ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಯು ಕೀ ಶಿ ಅವರನ್ನು ವಿಕ್ಟರ್ ಅಕ್ಸೆಲ್ಸೆನ್ 21-15, 21-7 ಅಂತರದಲ್ಲಿ ಮಣಿಸಿದರು.

  ಅಗ್ರ ಶ್ರೇಯಾಂಕದ ಟಿಯಾನ್ ಚೆನ್ ಚೋ ಅವರು ಝು ವೇ ವಾಂಗ್‌ರನ್ನು 21-11, 21-12 ಅಂತರದಲ್ಲಿ ಸೋಲಿಸಿದರು. ಆ್ಯಂಡ್ರೆಸ್ ಆ್ಯಟೊನ್ಸೆನ್ ಅವರು ರಾಸ್‌ಮಸ್ ಜೆಮ್ಕೆರನ್ನು 21-10, 21-13 ಅಂತರದಲ್ಲಿ ಸೋಲುಣಿಸಿದರು. ಮಹಿಳಾ ಸಿಂಗಲ್ಸ್ ಚಾಂಪಿಯನ್ ಚೀನಾದ ಚೆನ್ ಯುಫೈ ಅವರು ವರ್ಲ್ಡ್ ನಂ.5 ರಚನಾಕ್ ಇಂಟನಾನ್ ವಿರುದ್ಧ 17-21, 21-15, 21-17 ಅಂತರದಲ್ಲಿ ಜಯ ಸಾಧಿಸಿದರು.

  22ರ ಹರೆಯದ ಚೆನ್ ಎರಡು ಬಾರಿ ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು ಥಾಯ್ಲೆಂಡ್, ಆಸ್ಟ್ರೇಲಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News