ಆಸ್ಟ್ರೇಲಿಯ-ನ್ಯೂಝಿಲ್ಯಾಂಡ್ ಕ್ರಿಕೆಟ್ ಸರಣಿ ರದ್ದು

Update: 2020-03-15 05:59 GMT

ಮೆಲ್ಬೋರ್ನ್, ಮಾ.14: ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ನಡುವಿನ ಚಾಪೆಲ್-ಹ್ಯಾಡ್ಲಿ ಏಕದಿನ ಸರಣಿಯ ಉಳಿದೆರಡು ಪಂದ್ಯಗಳನ್ನು ಶನಿವಾರ ರದ್ದುಪಡಿಸಲಾಗಿದೆ. ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ನ್ಯೂಝಿಲ್ಯಾಂಡ್ ಆದಷ್ಟು ಬೇಗನೆ ಸ್ವದೇಶಕ್ಕೆ ವಾಪಸಾಗಲು ಬಯಸುತ್ತಿದೆ.

ನ್ಯೂಝಿಲ್ಯಾಂಡ್ ಸರಕಾರದ ಹೊಸ ಪ್ರಯಾಣದ ನಿರ್ಬಂಧಕ್ಕೆ ಪ್ರತಿಯಾಗಿ ಕ್ರಿಕೆಟ್ ಆಸ್ಟ್ರೇಲಿಯವು ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಕ್ಕೆ ತಕ್ಷಣವೇ ಸ್ವದೇಶಕ್ಕೆ ಮರಳುವಂತೆ ಸೂಚಿಸಿದೆ. ಎರಡೂ ಸರಣಿಯನ್ನು ಮತ್ತೊಮ್ಮೆ ಆಡುವ ಅವಕಾಶದ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ಕ್ರಿಕೆಟ್ ಕಾರ್ಯೋನ್ಮುಖವಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.

ನ್ಯೂಝಿಲ್ಯಾಂಡ್ ಶನಿವಾರ ಗಡಿ ನಿರ್ಬಂಧವನ್ನು ಬಿಗಿಗೊಳಿಸಿದ್ದು, ಆಸ್ಟ್ರೇಲಿಯದಿಂದ ತನ್ನ ದೇಶದೊಳಗೆ ಪ್ರವೇಶಿಸುವವರನ್ನು 14 ದಿನಗಳ ಕಾಲ ಕಡ್ಡಾಯವಾಗಿ ಪ್ರತ್ಯೇಕವಾಗಿರಬೇಕೆಂದು ತಿಳಿಸಿತ್ತು. ಈ ಹೊಸ ನಿರ್ಬಂಧ ರವಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಒಂದು ವೇಳೆ ನ್ಯೂಝಿಲ್ಯಾಂಡ್ ತಂಡ ಆಸ್ಟ್ರೇಲಿಯದಲ್ಲಿ ಸರಣಿ ಪೂರ್ಣಗೊಳಿಸಲು ಮುಂದಾದರೆ, ತನ್ನ ದೇಶಕ್ಕೆ ವಾಪಸಾದ ಬಳಿಕ ಪ್ರತ್ಯೇಕವಾಗಿರಬೇಕಾಗುತ್ತದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯ ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂನ ಎದುರು ನಡೆದಿತ್ತು. ಈ ಪಂದ್ಯವನ್ನು ಆಸ್ಟ್ರೇಲಿಯ ತಂಡ ಗೆದ್ದುಕೊಂಡಿತ್ತು. ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಗಂಟಲು ನೋವಿದೆ ಎಂದು ಹೇಳಿದ್ದ ಕಿವೀಸ್ ವೇಗದ ಬೌಲರ್ ಲಾಕಿ ಫರ್ಗ್ಯುಸನ್‌ರನ್ನು ಕೋವಿಡ್-19 ವೈರಸ್ ಭೀತಿಯ ಕಾರಣಕ್ಕೆ ಪರೀಕ್ಷೆ ನಡೆಸಲಾಗಿದ್ದು, ಮುಂಜಾಗೃತಾ ಕ್ರಮವಾಗಿ ಸಹ ಆಟಗಾರರಿಂದ ಅವರನ್ನು ಪ್ರತ್ಯೇಕವಾಗಿಡಲಾಗಿದೆ. ಅವರ ಪರೀಕ್ಷೆಯ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

ಶ್ರೀಲಂಕಾದ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸ ಹಾಗೂ ಭಾರತದಲ್ಲಿ ನಡೆಯುತ್ತಿದ್ದ ದಕ್ಷಿಣ ಆಫ್ರಿಕಾದ ಏಕದಿನ ಸರಣಿಯು ರದ್ದುಗೊಂಡ ಮರುದಿನ ಇದೀಗ ಚಾಪೆಲ್-ಹ್ಯಾಡ್ಲಿ ಸರಣಿಯು ರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News