ಮಾರ್ಚ್ 31ರ ತನಕ ಎಲ್ಲ ಫುಟ್ಬಾಲ್ ಟೂರ್ನಿಗಳು ಸ್ಥಗಿತ

Update: 2020-03-15 06:02 GMT

 ಹೊಸದಿಲ್ಲಿ, ಮಾ.14: ಕೋವಿಡ್-19 ವೈರಸ್ ತೀವ್ರಗತಿಯಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಫ್ಲಾಗ್‌ಶೀಪ್ ಐ-ಲೀಗ್ ಸಹಿತ ಎಲ್ಲ ವಯೋಮಿತಿಯ ಫುಟ್ಬಾಲ್ ಟೂರ್ನಮೆಂಟ್‌ಗಳನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಮಾರ್ಚ್ 31ರ ತನಕ ರದ್ದುಪಡಿಸಿದೆ. ರವಿವಾರದಿಂದಲೇ ಅಮಾನತು ಜಾರಿಗೆ ಬರಲಿದೆ.

‘‘ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಸಲಹೆಗಳು, ಹಲವು ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಎಐಎಫ್‌ಎಫ್ ವ್ಯಾಪ್ತಿಗೆ ಬರುವ ಎಲ್ಲ ಫುಟ್ಬಾಲ್ ಚಟುವಟಿಕೆಗಳನ್ನು 2020ರ ಮಾರ್ಚ್ 31ರ ತನಕ ಎಐಎಫ್‌ಎಫ್ ರದ್ದುಪಡಿಸಿದೆ’’ ಎಂದು ದೇಶದ ಪ್ರಮುಖ ಫುಟ್ಬಾಲ್ ಆಡಳಿತ ಮಂಡಳಿ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ವಿಶ್ವದಾದ್ಯಂತ 5,000ಕ್ಕೂ ಅಧಿಕ ಜನರ ಜೀವಕ್ಕೆ ಸಂಚಕಾರ ತಂದಿರುವ ಕೊರೋನ ವೈರಸ್‌ನಿಂದಾಗಿ ವಿಶ್ವದಾದ್ಯಂತ ಹಲವು ಟೂರ್ನಿಗಳು ಒಂದೋ ರದ್ದಾಗಿವೆ ಅಥವಾ ಮುಂದೂಡಲ್ಪಟ್ಟಿವೆ.

  ಪ್ರತಿಕೂಲ ಪರಿಸ್ಥಿತಿಯ ಕಾರಣಕ್ಕೆ ಶುಕ್ರವಾರ ಬಿಸಿಸಿಐ ಅತ್ಯಂತ ಶ್ರೀಮಂತ ಟ್ವೆಂಟಿ-20 ಟೂರ್ನಿ ಐಪಿಎಲ್‌ನ್ನು ಎಪ್ರಿಲ್ 15ರ ತನಕ ಮುಂದೂಡಿತ್ತು. ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಕ್ರೀಡಾ ಟೂರ್ನಿಗಳಿಂದ ಕ್ರೀಡಾಭಿಮಾನಿಗಳನ್ನು ದೂರ ಇಡಬೇಕೆಂದು ಕ್ರೀಡಾ ಸಚಿವಾಲಯ ಆದೇಶಿಸಿತ್ತು. ಇದರಿಂದ ತೀವ್ರ ಒತ್ತಡಕ್ಕೆ ಸಿಲುಕಿದ ಬಿಸಿಸಿಐ ಮಾರ್ಚ್ 29ರಿಂದ ಆರಂಭವಾಗಬೇಕಾಗಿದ್ದ ಐಪಿಎಲ್ ಟೂರ್ನಿಯನ್ನು ಎಪ್ರಿಲ್ 15ರ ತನಕ ಮುಂದೂಡಿದೆ.

ಐಪಿಎಲ್ ಟೂರ್ನಿ ಮಾತ್ರವಲ್ಲ ಭಾರತ-ದಕ್ಷಿಣ ಆಫ್ರಿಕಾ ಮಧ್ಯೆ ನಡೆಯಬೇಕಾಗಿದ್ದ ಏಕದಿನ ಸರಣಿ, ಇತರ ಟೂರ್ನಿಗಳನ್ನು ಮುಂದೂಡಿಕೆ ಇಲ್ಲವೇ ರದ್ದುಪಡಿಸಲಾಗಿದೆ.

 ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಮನುಷ್ಯನ ಆರೋಗ್ಯ ಹಾಗೂ ಜೀವನವನ್ನು ಅರ್ಥ ಮಾಡಿಕೊಳ್ಳಲಿದ್ದು, ಅದಕ್ಕೆ ಪ್ರಾಮುಖ್ಯತೆ ನೀಡುವತ್ತ ಆದ್ಯತೆ ನೀಡಲಿದೆ. ಈ ವಿಚಾರದಲ್ಲಿ ಎಐಎಫ್‌ಎಫ್ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಎಲ್ಲ ಹೀರೊ ಐ-ಲೀಗ್ ಪಂದ್ಯಗಳನ್ನು 2020ರ ಎಪ್ರಿಲ್ 15ರ ತನಕ ಅಮಾನತುಗೊಳಿಸಲಾಗಿದೆ. ಎಲ್ಲ ಹೀರೊ ಡಿವಿಜನ್-2, ಹೀರೊ ಯೂತ್ ಲೀಗ್‌ಗಳು, ಗೋಲ್ಡನ್ ಬೇಬಿ ಲೀಗ್‌ಗಳು ಹಾಗೂ ರಾಷ್ಟ್ರೀಯ ಸ್ಪರ್ಧಾವಳಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ ಎಂದು ಎಐಎಫ್‌ಎಫ್ ತಿಳಿಸಿದೆ.

ಶನಿವಾರ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ಫೈನಲ್ ಪಂದ್ಯವನ್ನು ಮುಚ್ಚಿದ ಬಾಗಿಲೊಳಗೆ ಆಡಲಾಗುತ್ತಿದೆ. ರವಿವಾರ ಚಾಂಪಿಯನ್ಸ್ ಮೋಹನ್ ಬಗಾನ್ ಹಾಗೂ ಈಸ್ಟ್ ಬಂಗಾಳ ನಡುವಿನ ಪಂದ್ಯ ಹಾಗೂ ಐ-ಲೀಗ್‌ನ ಉಳಿದಿರುವ 28 ಪಂದ್ಯಗಳನ್ನು ಖಾಲಿ ಸ್ಟೇಡಿಯಂಗಳಲ್ಲಿ ಆಡಲು ನಿರ್ಧರಿಸಲಾಗಿದೆ ಎಂದು ಶನಿವಾರ ಎಐಎಫ್‌ಎಫ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News