ಜಪಾನ್‌ನಲ್ಲಿ ಒಲಿಂಪಿಕ್ಸ್ ಸಿದ್ಧತೆ ಮುಂದುವರಿದಿದೆ: ಪ್ರಧಾನಮಂತ್ರಿ ಅಬೆ

Update: 2020-03-15 06:42 GMT

ಟೋಕಿಯೊ, ಮಾ.14: ಕೊರೋನ ವೈರಸ್ ಭೀತಿಯಿಂದಾಗಿ ಬೇಸಿಗೆ ಗೇಮ್ಸ್‌ನ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳವಳ ಹೆಚ್ಚಾಗುತ್ತಿರುವ ಹೊರತಾಗಿಯೂ ಒಲಿಂಪಿಕ್ಸ್ ಆತಿಥ್ಯಕ್ಕೆ ಜಪಾನ್‌ನಲ್ಲಿ ಈಗಲೂ ಸಿದ್ಧತೆ ಮುಂದುವರಿದಿದೆ ಎಂದು ಪ್ರಧಾನಮಂತ್ರಿ ಶಿಂರೊ ಅಬೆ ಶನಿವಾರ ಹೇಳಿದ್ದಾರೆ.

ಇತರ ಜಾಗತಿಕ ಕ್ರೀಡಾ ಸ್ಪರ್ಧೆಗಳು ಸ್ಥಗಿತಗೊಳ್ಳುತ್ತಿರುವ ನಡುವೆ ಒಲಿಂಪಿಕ್ಸ್ ನಿಗದಿಯಂತೆ ನಡೆಯಲಿದೆ ಎಂದು ಅಬೆ ಹಾಗೂ ಅವರ ಸರಕಾರ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಯೋಜಕರು ಒಂದು ವರ್ಷ ಕಾಲ ಒಲಿಂಪಿಕ್ಸ್ ಮುಂದೂಡುವ ಕುರಿತು ಪರಿಗಣಿಸಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ ನಿಗದಿಯಾಗಿರುವ ಒಲಿಂಪಿಕ್ಸ್ ಮುಂದೂಡಲ್ಪಡಲಿದೆ ಎಂಬ ಊಹಾಪೋಹ ಕೇಳಿಬರುತ್ತಿದೆ.

ಒಲಿಂಪಿಕ್ಸ್ ಕುರಿತ ಹೇಳಿಕೆಯ ಬಳಿಕ ಅಬೆ ಹಾಗೂ ಟ್ರಂಪ್ ಮಾತುಕತೆ ನಡೆಸಿದ್ದು, ಒಲಿಂಪಿಕ್ಸ್ ತಾಣ ಅದ್ಭುತವಾಗಿದೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು. ಆದರೆ, ಟ್ರಂಪ್ ಟ್ವೀಟ್ ಗೇಮ್ಸ್ ಪ್ರಾಯೋಜಕರಿಗೆ ಸಮಾಧಾನ ತಂದಿಲ್ಲ. ಅವರೆಲ್ಲರೂ ಕೊರೋನ ವೈರಸ್ ಸ್ಪರ್ಧೆಯ ಮೇಲೆ ಯಾವ ರೀತಿಯ ಪರಿಣಾಮಬೀರಬಹುದೆಂಬ ಬಗ್ಗೆಯೇ ಚಿಂತಿತರಾಗಿದ್ದಾರೆ.

ಒಲಿಂಪಿಕ್ಸ್ ಕ್ರೀಡಾ ಜ್ಯೋತಿ ರಿಲೇಯ ಮೂಲಕ ಒಲಿಂಪಿಕ್ಸ್ ಕ್ರೀಡಾಜ್ಯೋತಿ ಆತಿಥೇಯ ದೇಶದಲ್ಲಿ ಪರ್ಯಟನೆ ನಡೆಸಲಿದೆ. ಇನ್ನೆರಡು ವಾರಗಳಲ್ಲಿ ಜಪಾನ್‌ನ ಫುಕುಶಿಮಾದಲ್ಲಿ ಇದು ಆರಂಭವಾಗಲಿದೆ. ಗ್ರೀಸ್‌ನ ಮೂಲಕ ಕ್ರೀಡಾಜ್ಯೋತಿ ಆಗಮಿಸುವ ಪ್ರಕ್ರಿಯೆ ಈಗಾಗಲೇ ಮೊಟಕುಗೊಂಡಿದೆ.

‘‘ನಾವು ಸೋಂಕು ಹರಡುವಿಕೆಯಿಂದ ಹೊರಬಂದಿದ್ದು, ಯಾವುದೇ ಸಮಸ್ಯೆ ಯಿಲ್ಲದೆ,ಯೋಜನೆಯ ಪ್ರಕಾರ ಒಲಿಂಪಿಕ್ಸ್‌ನ ಆತಿಥ್ಯ ವಹಿಸಲಿದ್ದೇವೆ. ಟ್ರಂಪ್ ಜೊತೆಗಿನ ಮಾತುಕತೆ ವೇಳೆ ಒಲಿಂಪಿಕ್ಸ್ ವಿಳಂಬ ಅಥವಾ ರದ್ದುಪಡಿಸುವ ಕುರಿತ ವಿಚಾರ ಪ್ರಸ್ತಾವಿಸಿಲ್ಲ’’ ಎಂದು ಟೋಕಿಯೊದಲ್ಲಿ ಸುದ್ದಿಗೋಷ್ಠಿಯಲ್ಲಿ ಅಬೆ ತಿಳಿಸಿದರು.

 ಗೇಮ್ಸ್ ವೇಳಾಪಟ್ಟಿಯಂತೆ ನಡೆಯಬೇಕೇ ಎಂದು ಅಂತಿಮ ನಿರ್ಧಾರ ಕೈಗೊಳ್ಳಲಿರುವ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯೊಂದಿಗೆ ಜಪಾನ್ ನಿರಂತರ ಸಂಪರ್ಕದಲ್ಲಿದೆ. ಗೇಮ್ಸ್ ಕುರಿತು ಟೋಕಿಯೊ ಅಂತಿಮ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ವಿಶ್ವ ಆರೋಗ್ಯ ಸಂಘಟನೆಯ ಸಲಹೆಯನ್ನು ನಾವು ಒಪ್ಪುತ್ತೇವೆ ಎಂದು ಅಬೆ ತಿಳಿಸಿದರು.

ಜಪಾನ್‌ನಲ್ಲಿ ಕೊರೋನ ವೈರಸ್ ಪ್ರಕರಣದ ಪ್ರಮಾಣ ಅತ್ಯಂತ ಕಡಿಮೆ ಇದೆ. ದಕ್ಷಿಣ ಕೊರಿಯ, ಚೀನಾ, ಇಟಲಿ, ಇರಾನ್ ಇನ್ನಿತರ ದೇಶಗಳಷ್ಟು ಭೀಕರವಾಗಿಲ್ಲ. ಸೋಂಕಿನ ತೀವ್ರತೆ ವಿಳಂಬವು ಗಂಭೀರ ಸ್ಥಿತಿಯಲ್ಲಿರುವವರಿಗೆ ಚಿಕಿತ್ಸೆ ನೀಡಲು ಅತ್ಯಂತ ಮುಖ್ಯವಾಗುತ್ತದೆ ಎಂದು ಅಬೆ ಹೇಳಿದರು.

ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವ ಅಗತ್ಯ ಜಪಾನ್‌ಗೆ ಇಲ್ಲ. ಶುಕ್ರವಾರ ಸಂಸತ್ತಿನಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಅಧಿಕಾರ ನನಗೆ ನೀಡಲಾಗಿದೆ.ಶಾಲೆಗಳನ್ನು ಮುಚ್ಚುವುದು, ಜನಸಂದಣಿ ತಡೆಯುವುದು ಹಾಗೂ ಅಗತ್ಯವಿರುವ ವೈದ್ಯಕೀಯ ಸರಬರಾಜಿಗೆ ಅನುವು ಮಾಡುವ ಅವಕಾಶ ನನಗೆ ಲಭಿಸಿದೆ ಎಂದು ಅಬೆ ನುಡಿದರು.

ಗ್ರೀಸ್ ಒಲಿಂಪಿಕ್ಸ್ ಸಮಿತಿಯು ಉಳಿದಿರುವ ಒಲಿಂಪಿಕ್ಸ್ ಜ್ಯೋತಿ ರಿಲೇಯನ್ನು ಶುಕ್ರವಾರ ರದ್ದುಪಡಿಸಿದೆ. ಜನರನ್ನು ಆಕರ್ಷಿಸುವುದನ್ನು ತಡೆಯಲು ಈ ನಿರ್ಧಾರಕ್ಕೆ ಬರಲಾಗಿದೆ. ಜಪಾನ್‌ಗೆಮಾರ್ಚ್ 26ರಂದು ರಿಲೇ ಹಾದುಹೋಗಲಿದೆ.

ಜಪಾನ್‌ನಲ್ಲಿ ಶನಿವಾರ ಸಂಜೆಯ ತನಕ 21 ಹೊಸ ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಒಟ್ಟು 1,443 ಸೋಂಕುಪೀಡಿತ ಪ್ರಕರಣ ದಾಖಲಾಗಿದೆ. ಜಪಾನ್‌ನಲ್ಲಿ ವೈಸ್‌ಗೆ 28 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News