×
Ad

ಗಲಭೆ ಸಂತ್ರಸ್ತರ ವಿರುದ್ಧ ಕೇಂದ್ರ ಸರಕಾರ, ದಿಲ್ಲಿ ಪೊಲೀಸರು ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸಿ: ಪಾಪ್ಯುಲರ್ ಫ್ರಂಟ್

Update: 2020-03-15 12:23 IST

ಬೆಂಗಳೂರು : ಕೇಂದ್ರ ಸರಕಾರದ ಅಧೀನದಲ್ಲಿ ದಿಲ್ಲಿ ಪೊಲೀಸರು ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ಮತ್ತು ಗಲಭೆಗಳ ಮೊದಲು ಹಾಗೂ ನಂತರದ ಸಂತ್ರಸ್ತರ ಬೆಂಬಲಕ್ಕೆ ನಿಂತಿರುವ ಹೋರಾಟಗಾರರು ಮತ್ತು ಗುಂಪುಗಳ ವಿರುದ್ಧ ಕ್ರಮ ಕೈಗೊಳುತ್ತಿದ್ದಾರೆ. ಗಲಭೆಗಳಿಗೆ ಸಂಬಂಧಿಸಿದಂತೆ ಬಂಧಿತರಾಗುತ್ತಿರುವ ಪಟ್ಟಿಗೆ ಪೊಲೀಸರು ದಿನದಿಂದ ದಿನಕ್ಕೆ ಮುಸ್ಲಿಂ ಹೆಸರುಗಳು ಮತ್ತು ಹಿನ್ನೆಲೆಯ ವ್ಯಕ್ತಿಗಳ ಹೆಸರುಗಳನ್ನು ಸೇರಿಸುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಗಲಭೆ ಸಂತ್ರಸ್ತರ ವಿರುದ್ಧ ಕೇಂದ್ರ ಸರಕಾರ ಮತ್ತು ದಿಲ್ಲಿ ಪೊಲೀಸರು ನಡೆಸುತ್ತಿರುವ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.

ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ 2600 ಮಂದಿಯನ್ನು ಬಂಧಿಸಲಾಗಿದೆ, ಇವರಲ್ಲಿ ಬಹುತೇಕರು ಮುಸ್ಲಿಮರು. ಹಿಂಸಾಚಾರಗಳಲ್ಲಿ ಮೃತಪಟ್ಟ 53 ಜನರ ಸಂಪೂರ್ಣ ಮಾಹಿತಿಯೂ ಅಧಿಕೃತವಾಗಿ ಲಭ್ಯವಾಗಿದ್ದು ಮೃತರ ಪೈಕಿ ಬಹುತೇಕರು ಮುಸ್ಲಿಮರು.  ಗಲಭೆಗಳಲ್ಲಿ ಸುಮಾರು 25,000 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ನಾಶ ಮಾಡಲಾಗಿದೆ. ಕನಿಷ್ಟ 19 ಮಸೀದಿಗಳು ಮತ್ತು 4 ಮದ್ರಸಗಳನ್ನು ಧ್ವಂಸ ಅಥವಾ ಹಾನಿ ಮಾಡಲಾಗಿದೆ . ಶಿವ ವಿಹಾರ್‌ನಂತಹ ಪ್ರದೇಶಗಳಿಂದ ಓಡಿಸಲ್ಪಟ್ಟ ಮುಸ್ಲಿಮರಿಗೆ ಇನ್ನೂ ತಮ್ಮ ಹಾನಿಗೊಳಗಾದ ಮನೆಗಳಿಗೆ ವಾಪಸಾಗಲು ಅವಕಾಶ ನೀಡಲಾಗುತ್ತಿಲ್ಲ. ಕೇಂದ್ರ ಸರಕಾರದ ನಿಯಂತ್ರಣಕ್ಕೊಳಪಟ್ಟಿರುವ ದಿಲ್ಲಿ ಪೊಲೀಸರ ನಿಷ್ಕ್ರೀಯತೆಯಿಂದ ಮಾತ್ರವಲ್ಲ, ಜೊತೆಗೆ ಹಲವು ವೀಡಿಯೊ ದೃಶ್ಯಾವಳಿಗಳು ಸಾಬೀತುಪಡಿಸಿರುವಂತೆ ಪೊಲೀಸರೂ ಈ ಹಿಂಸಾಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಪರಿಣಾಮ ಈ ಇಷ್ಟೆಲ್ಲವೂ ನಡೆದಿದೆ. ಬೆಂಕಿ ಹಚ್ಚುವವರು ಮತ್ತು ಗಲಭೆಕೋರ ಮುಖಗಳು, ಗಾಯಗೊಂಡ ಜನರನ್ನು ಹಿಂಸಿಸುವುದು ಮತ್ತು ಅವರನ್ನು ರಾಷ್ಟ್ರಗೀತೆ ಹಾಡುವಂತೆ ಒತ್ತಾಯಪಡಿಸುವುದು ಹಾಗೂ ಸಿಎಎ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಆಝಾದಿ ಘೋಷಣೆ ಕೂಗಿದ ಕಾರಣಕ್ಕೆ ಅವರನ್ನು ನಿಂದಿಸುವುದು, ಗಲಭೆಕೋರರ ಜೊತೆ ತಾವೂ ಕಲ್ಲುಗಳು ಮತ್ತು ಇಟ್ಟಿಗೆಗಳನ್ನು ಎತ್ತುವುದು ಮತ್ತು ಎಸೆಯುವುದು ಸಿಸಿಟಿವಿಯಲ್ಲಿ ಸೆರೆಯಾಗದಂತೆ ಪೊಲೀಸರು ಅವುಗಳನ್ನು ಒಡೆದು ಹಾಕುತ್ತಿರುವುದನ್ನು ಕೆಲವು ವೀಡಿಯೊಗಳು ಸ್ಪಷ್ಟವಾಗಿ ತೋರಿಸಿವೆ ಎಂದು ಪಿಎಫ್ಐ ರಾಜ್ಯ ಸಮಿತಿ ತಿಳಿಸಿದೆ.

ಪಾಪ್ಯುಲರ್ ಫ್ರಂಟ್ ದಿಲ್ಲಿ  ಅಧ್ಯಕ್ಷ ಫರ್ವೇಝ್ ಅಹ್ಮದ್ ಮತ್ತು ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಇಲ್ಯಾಸ್ ಅವರು ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನಾ ಜಾಥ ಆಯೋಜನೆ ಮಾಡಿರುವ ಬಗ್ಗೆ ತಿಳಿಸಲು ಪೊಲೀಸ್ ಠಾಣೆಗೆ ತೆರಳಿದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿತ್ತು. ಇದಕ್ಕೂ ಮೊದಲು ಪಿಎಫ್‌ಐ ಸದಸ್ಯ ಡ್ಯಾನಿಶ್ ಖಾನ್ ಅವರನ್ನೂ ಬಂಧಿಸಲಾಗಿತ್ತು. ಪಾಪ್ಯುಲರ್ ಫ್ರಂಟ್ ರಾಜ್ಯ ಕಚೇರಿ ಕಾರ್ಯದರ್ಶಿ ಮುಖೀತ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆದರೆ ದಿಲ್ಲಿ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಪ್ರಭ್‌ದೀಪ್ ಕೌರ್ ಬಂಧಿತ ಎಲ್ಲರಿಗೂ ಜಾಮೀನು ಮಂಜೂರು ಮಾಡಿದ್ದರು. ಬಂಧಿತರ ಮೇಲೆ ಹೊರಿಸಲಾಗಿರುವ ಆರೋಪಗಳು ಜಾಮೀನಿಗೆ ಅರ್ಹವಾಗಿದ್ದರೂ ಇವರಿಗೆ ಮೊದಲೇ ಯಾಕೆ ಜಾಮೀನು ನೀಡಲಾಗಿರಲಿಲ್ಲ ಎಂದು ಮಾರ್ಚ್ 17ರ ಒಳಗಾಗಿ ಲಿಖಿತ ವಿವರಣೆ ನೀಡುವಂತೆ ನ್ಯಾಯಾಧೀಶರು ತನಿಖಾಧಿಕಾರಿಗೆ ಸೂಚಿಸಿದ್ದಾರೆ ಎಂದು ಸಮಿತಿ ತಿಳಿಸಿದೆ.

ಸಂವಿಧಾನದ ಮೌಲ್ಯಗಳ ಮತ್ತು ಈ ದೇಶದ ಕಾನೂನಿನ ಬಹಿರಂಗ ಉಲ್ಲಂಘನೆ ಮತ್ತು ಆರೆಸ್ಸೆಸ್-ಬಿಜೆಪಿಯ ಕೋಮು ಮತಾಂಧತೆಯ ರಾಜಕೀಯದ ವಿರುದ್ಧ ಜೊತೆಯಾಗಿ ನಮ್ಮ ಪ್ರತಿರೋಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಎಲ್ಲ ನಾಗರಿಕರು ಮತ್ತು ಗುಂಪುಗಳು ತಮ್ಮ ಧ್ವನಿಯೆತ್ತಬೇಕೆಂದು ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಪ್ರಕಟನೆಯಲ್ಲಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News