ಆರೋಗ್ಯದ ಬಗ್ಗೆ ಮಾಹಿತಿ ಕೇಳಿಕೊಂಡು ಮನೆಗೆ ಬರುವ ಅನಧಿಕೃತ ವ್ಯಕ್ತಿಗಳ ಬಗ್ಗೆ ಎಚ್ಚರ: ಡಿಎಚ್‌ಒ ಡಾ.ಸೂಡಾ
ಉಡುಪಿ, ಮಾ.15: ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳೆಂದು ಹೇಳಿಕೊಂಡು ಮನೆ ಮನೆಗೆ ಭೇಟಿ ನೀಡುವ ಅನಧಿಕೃತ ವ್ಯಕ್ತಿಗಳಿಗೆ ಯಾವುದೇ ಮಾಹಿತಿ ನೀಡದಂತೆ ಹಾಗೂ ಮನೆಯೊಳಗೆ ಪ್ರವೇಶ ನೀಡಬಾರದು ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.
ಮಾ.15ರಂದು ಬನ್ನಂಜೆಯ ವಯೋವೃದ್ಧ ದಂಪತಿ ಇರುವ ಮನೆಗೆ ಈ ರೀತಿ ಹೇಳಿಕೊಂಡು ಬಂದ ಅಪರಿಚಿತರು, ಆರೋಗ್ಯದ ಬಗ್ಗೆ ಮಾಹಿತಿ ಕೋರಿದ್ದು, ಆಗ ಈ ದಂಪತಿ, ಆರೋಗ್ಯ ಇಲಾಖೆಯ ಗುರುತಿನ ಚೀಟಿ, ದಾಖಲಾತಿ ತೋರಿಸುವಂತೆ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಅನಧಿಕೃತ ವ್ಯಕ್ತಿಗಳು ಮಾಹಿತಿ ಕೇಳದೆ ಅಲ್ಲಿಂದ ತೆರಳಿರುವ ಬಗ್ಗೆ ದಂಪತಿ, ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ಡಾ.ಸೂಡಾ ಹೇಳಿದ್ದಾರೆ.
ಪ್ರಸ್ತುತ ಜಿಲ್ಲಾ ಆರೋಗ್ಯ ಇಲಾಖೆಯಿಂದ, ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಇವರಿಗೆ ಇಲಾಖೆ ವತಿಯಿಂದ ಸಮವಸ್ತ್ರ, ಗುರುತಿನ ಚೀಟಿ, ಅಧಿಕೃತ ಆದೇಶ ಪತ್ರ ನೀಡಲಾಗಿದೆ. ಇವರು ಮನೆಗೆ ಭೇಟಿ ನೀಡಿದಾಗ ಮಾತ್ರ ಕೋರುವ ಅಗತ್ಯ ಮಾಹಿತಿ ನೀಡುವಂತೆ ಹಾಗೂ ಇವರನ್ನು ಹೊರತುಪಡಿಸಿ ಇತರೆ ಅನಧಿಕೃತ ವ್ಯಕ್ತಿಗಳು ಮಾಹಿತಿ ಕೇಳಿ ಬಂದಲ್ಲಿ, ತಕ್ಷಣ ಆರೋಗ್ಯ ಇಲಾಖೆಯ ದೂ.ಸಂ.94498 43066ಗೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಡಾ. ಸೂಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.