ಎಸ್ ಬಿಐ 'ಹೃದಯವಿಲ್ಲದ' ಬ್ಯಾಂಕ್: ನಿರ್ಮಲಾ ಸೀತಾರಾಮನ್ ವಾಗ್ದಾಳಿಯ ಆಡಿಯೋ ವೈರಲ್

Update: 2020-03-15 09:15 GMT

ಹೊಸದಿಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚೇರ್ ಮ್ಯಾನ್ ರಜನೀಶ್ ಕುಮಾರ್ ಅವರ ವಿರುದ್ಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಕ್ರೋಶ ವ್ಯಕ್ತಪಡಿಸಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 'ಹೃದಯವಿಲ್ಲದ' ಮತ್ತು 'ಅಸಮರ್ಥ' ಬ್ಯಾಂಕ್ ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಿರುವುದು ಆಡಿಯೋದಲ್ಲಿ ಕೇಳಿಸುತ್ತದೆ. ಯುಟ್ಯೂಬ್ ನಲ್ಲಿ ಈ ಆಡಿಯೋವನ್ನು ಅಪ್ ಲೋಡ್ ಮಾಡಲಾಗಿದ್ದು, ವೈರಲ್ ಆಗಿದೆ.

ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿರುವ ಬ್ಯಾಂಕಿಂಗ್ ಸಮಸ್ಯೆಗಳ ಬಗ್ಗೆ ಬ್ಯಾಂಕರ್ ಗಳ ಜೊತೆ ಫೆಬ್ರವರಿಯಲ್ಲಿ ನಡೆದ ಚರ್ಚೆಯ ಸಂದರ್ಭ ನಿರ್ಮಲಾ ಸೀತಾರಾಮನ್ ಈ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮ ಕೂಡ ಇದ್ದರು.

ಕೆವೈಸಿಯಲ್ಲಿನ ಸಮಸ್ಯೆಯಿಂದಾಗಿ ಅಸ್ಸಾಂನ 2.5 ಲಕ್ಷ ಚಹಾ ತೋಟದ ಕಾರ್ಮಿಕರ ಖಾತೆಗಳು ಸ್ಥಗಿತಗೊಂಡಿರುವುದರಿಂದ ನಿರ್ಮಲಾ ಸೀತಾರಾಮನ್ ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ. ಇದರಿಂದಾಗಿ ಕಾರ್ಮಿಕರು ನೇರ ಲಾಭ ವರ್ಗಾವಣೆ ಯೋಜನೆಯ ಲಾಭವನ್ನು  ಪಡೆಯಲು ಸಮಸ್ಯೆಯಾಗಿತ್ತು.

"ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ... ನೀವು ಅತಿ ದೊಡ್ಡ ಬ್ಯಾಂಕ್ ಎಂದು ನನಗೆ ಹೇಳಿದರೆ ಅದು ಒಳ್ಳೆಯದಲ್ಲ... ನಿಮ್ಮದು ಹೃದಯವಿಲ್ಲದ ಬ್ಯಾಂಕ್. ನಿಮ್ಮ ಅಸಮರ್ಥತೆಯೇ ಇದಕ್ಕೆಕಾರಣ. ಈ ವೈಫಲ್ಯಕ್ಕೆ ನೀವೇ ಸಂಪೂರ್ಣ ಜವಾಬ್ದಾರರು" ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಿರುವುದು ಆಡಿಯೋದಲ್ಲಿದೆ.

ತದನಂತರ ಎಸ್ ಬಿಐ ಮುಖ್ಯಸ್ಥ ಕುಮಾರ್ ನಿರ್ಮಲಾ ಸೀತಾರಾಮನ್ ಬಳಿ ಕ್ಷಮೆಯಾಚಿಸುತ್ತಿರುವುದೂ ಆಡಿಯೋದಲ್ಲಿದೆ.

ನಿರ್ಮಲಾ ಹೇಳಿಕೆ ಖಂಡಿಸಿ ಬಳಿಕ ವಾಪಸ್ ಪಡೆದ ಬ್ಯಾಂಕ್ ಅಸೋಸಿಯೇಶನ್

ಈ ಆಡಿಯೋ ವೈರಲ್ ಆದ ನಂತರ ಬ್ಯಾಂಕ್ ಅಧಿಕಾರಿಗಳ ಅಸೋಸಿಯೇಶನ್ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವರ್ತನೆಯನ್ನು ಖಂಡಿಸಿತ್ತು. ಆದರೆ ಕೂಡಲೇ ತನ್ನ ಹೇಳಿಕೆಯನ್ನು ವಾಪಸ್ ಪಡೆದಿದೆ.

ಸೀತಾರಾಮನ್ ಹೇಳಿಕೆಯನ್ನು ಖಂಡಿಸಿದ್ದ ಅಸೋಸಿಯೇಶನ್ ಅದನ್ನು 'ಅಹಿತಕರ' ಎಂದಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News