ಟೇಕ್ ಆಫ್ ಗೆ ಕೆಲವೇ ನಿಮಿಷಗಳಿರುವಾಗ ಪ್ರಯಾಣಿಕನಿಗೆ ಕೊರೊನಾವೈರಸ್ ದೃಢ: ವಿಮಾನದಲ್ಲಿದ್ದ ಎಲ್ಲರೂ ಆಸ್ಪತ್ರೆಗೆ
Update: 2020-03-15 15:52 IST
ಕೊಚ್ಚಿ: ಟೇಕ್ ಆಫ್ ಗೆ ಕೆಲವೇ ನಿಮಿಷಗಳಿರುವಾಗ ಬ್ರಿಟಿಷ್ ಪ್ರಜೆಯೊಬ್ಬನಿಗೆ ಕೊರೊನಾವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಎಮಿರೇಟ್ಸ್ ವಿಮಾನದಲ್ಲಿದ್ದ ಎಲ್ಲಾ 270 ಪ್ರಯಾಣಿಕರನ್ನು ತೆರವುಗೊಳಿಸಿದ ಘಟನೆ ಕೊಚ್ಚಿಯಲ್ಲಿ ನಡೆದಿದೆ.
ಎಲ್ಲಾ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ತಪಾಸಣೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಕೇರಳದ ಮುನ್ನಾರ್ ಗೆ ಪ್ರವಾಸಕ್ಕೆ ಬಂದಿದ್ದ 18 ಮಂದಿಯ ತಂಡದಲ್ಲಿದ್ದ ಬ್ರಿಟಿಷ್ ಪ್ರಜೆ ವಿಮಾನದಲ್ಲಿದ್ದು, ಆತನ ಮೇಲೆ ಹಿಂದಿನಿಂದಲೂ ನಿಗಾ ಇರಿಸಲಾಗಿತ್ತು. ಹೊಟೇಲ್ ನಿಂದ ತೆರಳುವಾಗ ಆತ ಆರೋಗ್ಯಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಮತ್ತು ಕೊಚ್ಚಿ ವಿಮಾನ ನಿಲ್ದಾಣ ತಲುಪಿದ್ದ. ವೈದ್ಯಕೀಯ ಪರೀಕ್ಷೆಯಲ್ಲಿ ಆತನಿಗೆ ಕೊರೊನಾವೈರಸ್ ತಗಲಿರುವುದು ದೃಢಪಟ್ಟ ನಂತರ ವಿಮಾನ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.