ವಿಶ್ವಾಸಮತ ಯಾಚನೆಗೆ ಮುನ್ನ ಜೈಪುರದಿಂದ ಭೋಪಾಲಕ್ಕೆ ಮರಳಿದ ಕಾಂಗ್ರೆಸ್ ಶಾಸಕರು
ಭೋಪಾಲ,ಮಾ.15: ಮಧ್ಯಪ್ರದೇಶದ ಕಮಲನಾಥ್ ಸರಕಾರವು ಸೋಮವಾರ ವಿಶ್ವಾಸಮತ ಅಗ್ನಿಪರೀಕ್ಷೆಯನ್ನು ಎದುರಿಸಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೈಪುರದ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದ ತನ್ನ ಶಾಸಕರನ್ನು ರವಿವಾರ ಭೋಪಾಲಕ್ಕೆ ಸ್ಥಳಾಂತರಿಸಿದೆ. ಬಿಜೆಪಿ ‘ಕುದುರೆ ವ್ಯಾಪಾರ’ಕ್ಕೆ ಪ್ರಯತ್ನಿಸುವ ಭೀತಿಯಿಂದ ಈ ಶಾಸಕರನ್ನು ಜೈಪುರಕ್ಕೆ ಸಾಗಿಸಲಾಗಿತ್ತು.
ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯಲಿದೆ ಎಂದು ರಾಜ್ಯಪಾಲ ಲಾಲ್ಜಿ ಟಂಡನ್ ಅವರು ಶನಿವಾರ ಪ್ರಕಟಿಸಿದ್ದು,ಅದಕ್ಕೂ ಮುನ್ನ ಸ್ಪೀಕರ್ ಎನ್.ಪಿ.ಪ್ರಜಾಪತಿ ಅವರು ಬೆಂಗಳೂರಿನಲ್ಲಿರುವ ಆರು ಬಂಡುಕೋರ ಶಾಸಕರ ರಾಜೀನಾಮೆಗಳನ್ನು ಸ್ವೀಕರಿಸಿದ್ದರು.
ವಿಧಾನಸಭೆಯ ಮುಂಗಡಪತ್ರ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದ್ದು,ಜೈಪುರದಿಂದ ವಾಪಸ್ ಕರೆತರಲಾಗಿರುವ ಕಾಂಗ್ರೆಸ್ ಶಾಸಕರನ್ನು ನಗರದ ಹೋಟೆಲ್‌ವೊಂದರಲ್ಲಿ ಉಳಿಸಲಾಗಿದೆ.
ಕಾಂಗ್ರೆಸ್ ತನ್ನ ಬಹುಮತವನ್ನು ಕಳೆದುಕೊಂಡಿದೆ ಎಂದು ಬಿಜೆಪಿಯ ಮುಖ್ಯ ಸಚೇತಕ ನರೋತ್ತಮ ಮಿಶ್ರಾ ಹೇಳಿದರೆ,ಸದನದಲ್ಲಿ ಬಹುಮತವನ್ನು ಸಾಬೀತುಗೊಳಿಸುವುದಾಗಿ ಕಾಂಗ್ರೆಸ್ ಪ್ರತಿಪಾದಿಸಿದೆ. ‘ನಮ್ಮ ಬಹುಮತವನ್ನು ಸಾಬೀತುಗೊಳಿಸುವ ಬಗ್ಗೆ ನಮಗೆ ವಿಶ್ವಾಸವಿದೆ ’ಎಂದು ಸಾರ್ವಜನಿಕ ಸಂಪರ್ಕ ಸಚಿವ ಪಿ.ಸಿ.ಶರ್ಮಾ ಹೇಳಿದರು.
ವಿಶ್ವಾಸಮತ ಯಾಚನೆ ಸಂದರ್ಭ ಸದನದಲ್ಲಿ ಉಪಸ್ಥಿತರಿರುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮೆಲ್ಲ ಶಾಸಕರಿಗೆ ಸಚೇತಕಾಜ್ಞೆಯನ್ನು ಹೊರಡಿಸಿವೆ.
2018,ಡಿಸೆಂಬರ್‌ನಲ್ಲಿ ಅಧಿಕಾರದ ಗದ್ದುಗೆಯನ್ನೇರಿದ್ದ ಕಮಲನಾಥ ಸರಕಾರವು ಕಳೆದ ವಾರದವರೆಗೂ 230 ಸದಸ್ಯಬಲದ ವಿಧಾನಸಭೆಯಲ್ಲಿ 114 ಕಾಂಗ್ರೆಸ್ ಶಾಸಕರು ಸೇರಿದಂತೆ 121 ಸದಸ್ಯರ ಬೆಂಬಲ ಹೊಂದಿತ್ತು. ಉಳಿದವರು ಎಸ್‌ಪಿ, ಬಿಎಸ್‌ಪಿ ಮತ್ತು ಪಕ್ಷೇತರ ಶಾಸಕರಾಗಿದ್ದಾರೆ. ಆದರೆ 22 ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಸರಕಾರವೀಗ ಪತನದ ಅಂಚಿನಲ್ಲಿದೆ. ಬಿಜೆಪಿ 107 ಶಾಸಕರನ್ನು ಹೊಂದಿದ್ದರೆ,ಎರಡು ಸ್ಥಾನಗಳು ತೆರವಾಗಿವೆ.