×
Ad

​ಪಾಂಗಾಳದ ಯುವಕನಲ್ಲಿ ಕೊರೋನ ಸೋಂಕಿಲ್ಲ: ಡಿಎಚ್‌ಒ

Update: 2020-03-15 20:35 IST

ಉಡುಪಿ, ಮಾ.15: ಶಂಕಿತ ಕೊರೋನ ವೈರಸ್ ಲಕ್ಷಣದೊಂದಿಗೆ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಕಾಪು ತಾಲೂಕಿನ ಪಾಂಗಾಳದ ಯುವಕನಲ್ಲಿ ಕೊರೋನ ಸೊಂಕು ಪತ್ತೆಯಾಗಿಲ್ಲ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಜರ್ಮನಿಯಿಂದ ಆಗಮಿಸಿದ 31ರ ಹರೆಯದ ಈ ಯುವಕ ಶೀತ, ಕೆಮ್ಮು ಭಾದೆಗಾಗಿ ಮಾ.14ರಂದು ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿರುವ ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಾಗಿದ್ದು, ಈತನ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಅಂದೇ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಇಂದು ಮಧ್ಯಾಹ್ನ ನಂತರ ಬಂದ ವರದಿಯಲ್ಲಿ ಈ ಯುವಕನಲ್ಲಿ ಕೊರೋನ ಸೋಂಕು ಇಲ್ಲ ಎಂಬುದಾಗಿ ದೃಢಪಟ್ಟಿದೆ. ಚೇತರಿಸಿಕೊಳ್ಳುತ್ತಿರುವ ಇವರನ್ನು ಮಾ.16ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಇಂದು ಶಂಕಿತ ಕೊರೋನ ವೈರಸ್ ಲಕ್ಷಣದೊಂದಿಗೆ ಯಾರು ಕೂಡ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಉಡುಪಿ ನಗರದ ಮಾಲ್‌ಗಳನ್ನು ಕಡ್ಡಾಯ ವಾಗಿ ಬಂದ್ ಮಾಡುವಂತೆ ಹಾಗೂ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಧಾರ್ಮಿಕ ಕೇಂದ್ರಗಳಿಗೆ ಎಚ್ಚರ ವಹಿಸುವಂತೆ ಈಗಾಗಲೇ ಮನವಿ ವಾಡಲಾಗಿದೆ ಎಂದು ಅವರು ತಿಳಿಸಿದರು.

ವಿದೇಶದಿಂದ ಬಂದ 90 ಮಂದಿಗೆ ಸೂಚನೆ

ಈವರೆಗೆ ಮಣಿಪಾಲದ ಕೆಎಂಸಿಯಲ್ಲಿ ನಾಲ್ಕು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಆರು ಮಂದಿ ಸೇರಿದಂತೆ ಒಟ್ಟು 10 ಮಂದಿ ಶಂಕಿತ ಕೊರೋನ ವೈರಸ್ ಲಕ್ಷಣದೊಂದಿಗೆ ದಾಖಲಾಗಿದ್ದು, ಪರೀಕ್ಷೆಯಲ್ಲಿ ಎಲ್ಲರ ವರದಿಯೂ ನೆಗೆಟಿವ್ ಎಂಬುದಾಗಿ ಬಂದಿದೆ. ಇವರಲ್ಲಿ ಕೆಎಂಸಿಯಲ್ಲಿರುವ ಸಾಗರದ ಮಹಿಳೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿರುವ ಪಾಂಗಾಳದ ಯುವಕ ಹೊರತು ಪಡಿಸಿ ಉಳಿದ ಎಂಟು ಮಂದಿ ಈಗಾಗಲೇ ಬಿಡುಗಡೆ ಹೊಂದಿ ಮನೆಗೆ ತೆರಳಿದ್ದಾರೆ.

ಫೆ.29ರ ನಂತರ ಹೊರ ದೇಶಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿರುವ ಸುಮಾರು 90 ಮಂದಿಗೆ ಹೊರಗಡೆ ಬಾರದೆ ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಅವರಲ್ಲಿ ಕೊರೋನ ವೈರಸ್‌ನ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ಬಂದು ಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ ಎಂದು ಡಾ.ಸುಧೀರ್ ಚಂದ್ರ ಸೂಡ ತಿಳಿಸಿದರು.

ಸೇನಾ ತರಬೇತಿ ಬದಲು ಮಾಹಿತಿ

ಮಾ.16ರಿಂದ 31ರವರೆಗೆ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯ ಬೇಕಾ ಗಿದ್ದ ಸೇನಾ ತರಬೇತಿ ಶಿಬಿರವನ್ನು ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದ್ದು, ಅದರ ಬದಲು ಮಾ.16ರಂದು ಶಿಬಿರಾರ್ಥಿಗಳಿಗೆ ಕೇವಲ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ತರಬೇತಿಗಾಗಿ ಆಯ್ಕೆಯಾಗಿರುವ ಜಿಲ್ಲೆಯ 75-80 ಯುವಕ ರಿಗೆ ತರಬೇತಿಯ ಬದಲು ಸೇನೆಯ ಮುಖ್ಯಸ್ಥರ ಮೂಲಕ ಮಾಹಿತಿ ತರಬೇತಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗುವುದು. ಶಿಬಿರಾರ್ಥಿ ಗಳು ಈ ತರಬೇತಿಗಳನ್ನು ತಮ್ಮ ತಮ್ಮ ಊರಿನಲ್ಲೇ ಮಾಡಬೇಕಾ ಗುತ್ತದೆ ಎಂದು ಉಡುಪಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News