ಜಮ್ಮು-ಕಾಶ್ಮೀರದ ಹೊರಗಿನ ಜೈಲುಗಳಲ್ಲಿರುವವರನ್ನು ಮರಳಿ ಕರೆತರಲು ಒಂದಾಗುವಂತೆ ಪಕ್ಷಗಳಿಗೆ ಫಾರೂಕ್ ಅಬ್ದುಲ್ಲಾ ಕರೆ

Update: 2020-03-15 15:38 GMT

ಶ್ರೀನಗರ,ಮಾ.15: ಜಮ್ಮು-ಕಾಶ್ಮೀರದ ಹೊರಗಿನ ಜೈಲುಗಳಲ್ಲಿ ಬಂಧನದಲ್ಲಿರುವವರನ್ನು ಮಾನವೀಯ ನೆಲೆಯಲ್ಲಿ ಮರಳಿ ಕರೆತರಲು ಕೇಂದ್ರಕ್ಕೆ ಜಂಟಿಯಾಗಿ ಮನವಿ ಸಲ್ಲಿಸುವಂತೆ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ರವಿವಾರ ಎಲ್ಲ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.

 ತನ್ನನ್ನು ದಿಗ್ಬಂಧನದಿಂದ ಮುಕ್ತಗೊಳಿಸಿರುವ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಪ್ರಜ್ಞಾಪೂರ್ವಕವಾಗಿ ನಿವಾರಿಸುತ್ತಿದ್ದೇನೆ ಎಂದು ಶುಕ್ರವಾರ ಬಿಡುಗಡೆಗೊಂಡ ಬಳಿಕ ನೀಡಿರುವ ತನ್ನ ಮೊದಲ ಹೇಳಿಕೆಯಲ್ಲಿ 82ರ ಹರೆಯದ ಫಾರೂಕ್ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷದ ಆ.5ರಿಂದ ಜಮ್ಮು-ಕಾಶ್ಮೀರದಲ್ಲಿ ಆಗಿರುವ ಮಹತ್ವದ ಬದಲಾವಣೆಗಳನ್ನು ತಿಳಿದುಕೊಳ್ಳಲು ರಾಜಕೀಯ ಅಭಿಪ್ರಾಯಗಳ ಮುಕ್ತ ಮತ್ತು ನೇರ ವಿನಿಮಯವನ್ನು ಪ್ರತಿಪಾದಿಸಿದ ಅವರು,‘ಇಂತಹ ರಾಜಕೀಯ ಚರ್ಚೆಗಳಿಗೆ ಪೂರಕ ವಾತಾವರಣದಿಂದ,ವಿಶೇಷವಾಗಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಬಂಧಿಸಲ್ಪಟ್ಟು ಜಮ್ಮು-ಕಾಶ್ಮೀರದ ಹೊರಗಿನ ಜೈಲುಗಳಲ್ಲಿರುವವರ ಸಂಖ್ಯೆಯನ್ನು ಪರಿಗಣಿಸಿದರೆ ನಾವಿನ್ನೂ ದೂರವೇ ಇದ್ದೇವೆ ’ಎಂದರು.

‘ರಾಜಕೀಯವು ನಮ್ಮನ್ನು ವಿಭಜಿಸುವ ಮುನ್ನ ಹೊರಗಿನ ಜೈಲುಗಳಲ್ಲಿರುವವರನ್ನು ಜಮ್ಮು-ಕಾಶ್ಮೀರಕ್ಕೆ ಮರಳಿ ಕರೆತರುವಂತೆ ಕೇಂದ್ರ ಸರಕಾರಕ್ಕೆ ಮನವಿಯನ್ನು ರಾಜ್ಯದಲ್ಲಿಯ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಬೆಂಬಲಿಸಬೇಕು’ ಎಂದ ಅವರು,‘ಅವರೆಲ್ಲ ಬಂಧಮುಕ್ತಗೊಳ್ಳುವುದನ್ನು ನೋಡಲು ನಾವು ಬಯಸಿದ್ದೇವೆ,ಅದಿಲ್ಲದಿದ್ದರೆ ಮಾನವೀಯ ನೆಲೆಯಲ್ಲಿ ಅವರನ್ನು ಇಲ್ಲಿಗೆ ಸ್ಥಳಾಂತರಿಸಬೇಕು’ಎಂದರು.

ಶನಿವಾರ ದಿಗ್ಬಂಧನದಲ್ಲಿರುವ ಪುತ್ರ ಒಮರ್ ಅಬ್ದುಲ್ಲಾರನ್ನು ಭೇಟಿಯಾಗಿದ್ದ ಫಾರೂಕ್,ನೂರಾರು ಕಾಶ್ಮೀರಿ ಕುಟುಂಬಗಳಿಗೆ ಹೋಲಿಸಿದರೆ ತಾನು ಹೆಚ್ಚು ಸುದೈವಿಯಾಗಿದ್ದೇನೆ ಎಂದರು. ಆದರೆ ಹೆಚ್ಚಿನ ಬಂಧಿತರ ಕುಟುಂಬಗಳಿಗೆ ತಮ್ಮವರನ್ನು ಭೇಟಿಯಾಗುವುದು ಅಷ್ಟು ಸುಲಭವಿಲ್ಲ. ಬಂಧಿತರನ್ನು ವಿವಿಧ ರಾಜ್ಯಗಳಲ್ಲಿ ಹರಡಿಕೊಂಡಿರುವ ಜೈಲುಗಳಲ್ಲಿ ಇರಿಸಲಾಗಿದೆ. ಅವರನ್ನು ವಾರಕ್ಕೆರಡು ಬಾರಿ ಭೇಟಿಯಾಗಲು ಅವಕಾಶವಿದ್ದು,ಇದಕ್ಕಾಗಿ ಪ್ರಯಾಣದ ವೆಚ್ಚವು ಕುಟುಂಬ ಸದಸ್ಯರಿಗೆ ಹೊರೆಯಾಗುತ್ತಿದೆ. ಇದರೊಂದಿಗೆ ಈಗ ದೂರದ ಪ್ರಯಾಣದಿಂದ ಕೊರೋನವೈರಸ್ ಸೋಂಕಿಗೆ ಗುರಿಯಾಗುವ ಭೀತಿಯೂ ಅವರನ್ನು ಕಾಡುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News