ಕಾಶ್ಮೀರಿಗಳಿಗೆ ಆಘಾತ ನೀಡಿದ್ದು 370ನೆ ವಿಧಿ ರದ್ದತಿಯಲ್ಲ, ಬದಲಾಗಿ…: ಮಾಜಿ ‘ರಾ’ ಮುಖ್ಯಸ್ಥ ದುಲತ್ ಹೇಳಿದ್ದು ಹೀಗೆ

Update: 2020-03-15 15:48 GMT

ಹೊಸದಿಲ್ಲಿ, ಮಾ. 14: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿಧಿ 370ನ್ನು ರದ್ದುಗೊಳಿಸುವ ನಿರ್ಧಾರಕ್ಕಿಂತ, ಜಮ್ಮು ಹಾಗೂ ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ರದ್ದುಗೊಳಿಸಿರುವ ನಿರ್ಧಾರದ ಬಗ್ಗೆ ಕಾಶ್ಮೀರ ಜನತೆ ಕಳವಳಗೊಂಡಿತ್ತು ಎಂದು ‘ರಾ’ದ ಮಾಜಿ ಮುಖ್ಯಸ್ಥ ಎ.ಎಸ್. ದುಲಾತ್ ಸುದ್ದಿ ಜಾಲ ತಾಣ Thewire.in ನೊಂದಿಗಿನ ಸಂದರ್ಶನದ ಸಂದರ್ಭ ತಿಳಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ ಪ್ರಧಾನಿ ಕಚೇರಿಯ ಕಾಶ್ಮೀರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ದುಲತ್, ಜಮ್ಮು ಹಾಗೂ ಕಾಶ್ಮೀರ ರಾಜ್ಯದ ಸ್ಥಾನಮಾನಕ್ಕೆ ಮರಳುವ ಬೇಡಿಕೆಗೆ ಕಾಶ್ಮೀರದಲ್ಲಿ ಶೀಘ್ರ ಬಲ ಬರಲಿದೆ ಎಂದರು. ಅಲ್ಲದೆ, ಕಾಶ್ಮೀರ ಸಹಜ ಸ್ಥಿತಿಗೆ ಮರಳುವುದು ಹೇಗೆ ಎಂಬ ಚಿಂತೆ ಕಾಶ್ಮೀರ ಜನತೆಯನ್ನು ಕಾಡುತ್ತಿದೆ ಎಂದು ಹೇಳಿದರು.

 ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ 2019 ಆಗಸ್ಟ್ 5ರಂದು ರದ್ದುಗೊಳಿಸಿತ್ತು ಹಾಗೂ ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜ್ಯವನ್ನು ಜಮ್ಮು ಕಾಶ್ಮೀರ ಹಾಗೂ ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.

  ಆಗಿನ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಲು ಇದ್ದಕ್ಕಿದ್ದಂತೆ ಕೇಂದ್ರ ಸರಕಾರ ನಿರ್ಧಾರ ತೆಗೆದುಕೊಂಡ ಬಳಿಕ ಸುದ್ದಿ ಜಾಲ ತಾರಣ ‘ವೈರ್’ಗಾಗಿ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಹಂಚಿಕೊಂಡ ದುಲತ್, ವಿಧಿ 370 ರದ್ದುಗೊಳಿಸಿರುವುದು ಕಾಶ್ಮೀರಿಗಳಿಗೆ ಆಘಾತ ಉಂಟು ಮಾಡಿತು. ಅನಂತರ ಕಾಶ್ಮೀರ ಹಾಗೂ ಕಾಶ್ಮೀರಿಗಳು ಈ ಬದಲಾವಣೆಯೊಂದಿಗೆ ಹೊಂದಿಕೊಂಡರು. ಯಾಕೆಂದರೆ ವಿಧಿ 370 ಮತ್ತೆ ಎಂದಿಗೂ ಬಾರದು ಎಂದು ಅವರಿಗೆ ತಿಳಿದಿತ್ತು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಗೃಹಬಂಧನಕ್ಕೆ ಒಳಗಾದ 6 ತಿಂಗಳ ಬಳಿಕ ಫಾರೂಕ್ ಅಬ್ದುಲ್ಲಾ ಅವರ ಬಿಡುಗಡೆಯನ್ನು ಸುಗಮಗೊಳಿಸಲು ಕೇಂದ್ರ ಸರಕಾರಕ್ಕೆ ನೆರವು ನೀಡುವಲ್ಲಿ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಯಾಗಿರುವ ದುಲತ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪರಿಗಣಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯ ಭೇಟಿಗೆ ಅನುಮತಿ ನೀಡಿದ ಬಳಿಕ ಗೃಹಬಂಧನದಲ್ಲಿ ಇದ್ದ ಫಾರೂಕ್ ಅಬ್ದುಲ್ಲಾ ಅವರನ್ನು ಫೆಬ್ರವರಿ 12ರಂದು ತಾನು ಭೇಟಿಯಾಗಿದ್ದೆ ಎಂದು ಸಂದರ್ಶನದಲ್ಲಿ ದುಲತ್ ಒಪ್ಪಿಕೊಂಡಿದ್ದರು.

ಫಾರೂಕ್ ಅಬ್ದುಲ್ಲಾ ಅವರು ಬಿಡುಗಡೆಯಾಗುವ ಸಂದರ್ಭ ಇತರ ನಾಯಕರನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇರಿಸಿದ್ದರು. ಇದರೊಂದಿಗೆ ಅವರ ಇನ್ನೊಂದು ಬೇಡಿಕೆಯಾಗಿದ್ದ ಜಮ್ಮು ಹಾಗೂ ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರಳಿಸುವ ಆಗ್ರಹ ಶೀಘ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ದುಲತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News