ತೈಲಬೆಲೆ ಕುಸಿತದ ಲಾಭವನ್ನು ಜನರಿಗೆ ವರ್ಗಾಯಿಸದೆ ತೆರಿಗೆ ಹೆಚ್ಚಿಸಿದ ‘ಬುದ್ಧಿವಂತ’ ಮೋದಿ: ರಾಹುಲ್

Update: 2020-03-15 15:57 GMT

ಹೊಸದಿಲ್ಲಿ,ಮಾ.15: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರವಿವಾರ ಟ್ವಿಟರ್ ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,ಜಾಗತಿಕ ಕಚ್ಚಾತೈಲ ಬೆಲೆಗಳ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ತಾನು ಮೂರು ದಿನಗಳ ಹಿಂದೆ ಪ್ರಧಾನಿಯನ್ನು ಕೋರಿಕೊಂಡಿದ್ದೆನೆ,ಆದರೆ ಈ ‘ಬುದ್ಧಿವಂತ’ ಹಾಗೆ ಮಾಡುವ ಬದಲು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದ್ದಾರೆ.

39,000 ಕೋ.ರೂ.ಗಳ ಹೆಚ್ಚುವರಿ ಆದಾಯ ಸಂಗ್ರಹಕ್ಕಾಗಿ ಸರಕಾರವು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ ಮೂರು ರೂ.ಗಳಷ್ಟು ತೀವ್ರವಾಗಿ ಹೆಚ್ಚಿಸಿದೆ.

ಸುದ್ದಿಗೋಷ್ಠಿಯಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಾಗತಿಕ ಕಚ್ಚಾತೈಲ ಬೆಲೆ ಕುಸಿತದ ಲಾಭವನ್ನು ಸರಕಾರವೇಕೆ ಗ್ರಾಹಕರಿಗೆ ವರ್ಗಾಯಿಸಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುವುದರಿಂದ ಉದ್ದೇಶಪೂರ್ವಕವಾಗಿ ನುಣುಚಿಕೊಂಡಿದ್ದ ವೀಡಿಯೊವನ್ನೂ ರಾಹುಲ್ ಟ್ಯಾಗ್ ಮಾಡಿದ್ದಾರೆ. ಪೆಟ್ರೋಲ್ ಮತ್ತು ಡೀಸಿಲ್ ಮೇಲೆ ಅಬಕಾರಿ ಸುಂಕ ಹೆಚ್ಚಳಕ್ಕಾಗಿ ಶನಿವಾರ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದ ಕಾಂಗ್ರೆಸ್,ಜಾಗತಿಕ ಬೆಲೆ ಕುಸಿತದ ಲಾಭವನ್ನು ಜನರಿಗೆ ವರ್ಗಾಯಿಸುವಂತೆ ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News