×
Ad

ಮಂಗಳೂರು: ಗೃಹ ರಕ್ಷಕ ದಳದಿಂದ ಸಾಧಕರೊಂದಿಗೆ ಸಂವಾದ

Update: 2020-03-15 21:47 IST

ಮಂಗಳೂರು, ಮಾ.15: ದ.ಕ.ಜಿಲ್ಲಾ ಗೃಹರಕ್ಷಕದಳದ ವತಿಯಿಂದ ನಗರದ ಮೇರಿಹಿಲ್‌ನ ಕಚೇರಿಯಲ್ಲಿ ರವಿವಾರ ‘ಸಾಧಕರೊಂದಿಗೆ ಸಂವಾದ’ ಹಾಗೂ ಕರೋನಾ ಜಾಗೃತಿ ಕಾರ್ಯಕ್ರಮ ಜರುಗಿತು. ಶಾಸಕ ಡಾ.ವೈ.ಭರತ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮಾಜದ ಬಗ್ಗೆ ಕಳಕಳಿಯಿದ್ದಾಗ ಸೇವೆ ಮಾಡಲು ಸಾಧ್ಯ. ಶಿಕ್ಷಣ, ಹಣ ಬೇಕೆಂದಿಲ್ಲ. ಇದಕ್ಕೆ ಹರೇಕಳ ಹಾಜಬ್ಬರೇ ಸಾಕ್ಷಿಯಾಗಿದ್ದಾರೆ. ಗೃಹರಕ್ಷಕರು ನಗು ಮುಖದ ಸೇವೆ ನೀಡಿದಾಗ ಸಮಾಜ ಗುರುತಿಸುತ್ತದೆ ಎಂದರು.

ಈ ಸಂದರ್ಭ ಗಿರೀಶ್ ಭಾರಧ್ವಾಜ್ ಹಾಗು ಹರೇಕಳ ಹಾಜಬ್ಬರನ್ನು ಗೃಹರಕ್ಷಕದಳದ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಶಾಲೆಗಾಗಿ ಮಾಡಿದ ಕೆಲಸವನ್ನು ಮಾಧ್ಯಮ, ಜನಪ್ರತಿನಿಧಿಗಳು ಗುರುತಿಸಿದ ಕಾರಣ ತಾನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಲು ಕಾರಣ. ಎಲ್ಲರಿಗೂ ಅಭಾರಿಯಾಗಿದ್ದೇನೆ ಎಂದರು.

ಗೃಹರಕ್ಷಕದಳದಲ್ಲಿ ಸುದೀರ್ಘ ಅವಧಿಗೆ ಸೇವೆ ಮಾಡಲು ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಊರ ಜನರ ಒತ್ತಡಕ್ಕೆ ಮಣಿದು ತೂಗು ಸೇತುವೆ ನಿರ್ಮಾಣ ಆರಂಭಿಸಿದೆ. ಈ ಕೆಲಸ ಮುಂದುವರಿದು ದೇಶದಾದ್ಯಂತ ಹಲವಾರು ತೂಗು ಸೇತುವೆಗಳನ್ನು ನಿರ್ಮಾಣ ಮಾಡುವಂತಾಯಿತು. ತನ್ನ ಸಾಧನೆ ಏನಿದ್ದರೂ ಆಕಸ್ಮಿಕ. ಪದ್ಮಶ್ರೀ ಪ್ರಶಸ್ತಿ ಅನಿರೀಕ್ಷಿತ ಎಂದ ಗಿರೀಶ್ ಭಾರದ್ವಾಜ್‌ ಕರ್ತವ್ಯವೇ ಸೇವೆ ಎಂದು ಪರಿಗಣಿಸಿ ಆಶಾವಾದದಿಂದ ಮುನ್ನಡೆದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಹಾಜಬ್ಬರು ಪ್ರೀತಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ, ಗಿರೀಶ್ ಭಾರಧ್ವಾಜ್ ಹಳ್ಳಿಗಳನ್ನು ಜೋಡಿಸಿ ಜನರ ಹೃದಯವನ್ನು ಗೆದ್ದಿದ್ದಾರೆ. ಇಬ್ಬರೂ ಸರಳತೆ ಮೈಗೂಡಿಸಿಕೊಂಡಿರುವುದು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತಿದೆ ಎಂದರು.

ಗೃಹರಕ್ಷಕದಳದ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿದರು. ಉಪ್ಪಿನಂಗಡಿಯ ಪ್ರಭಾರ ಘಟಕಾಧಿಕಾರಿ ದಿನೇಶ್ ವಂದಿಸಿದರು. ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News