ಕರಿಂಜೆಯಲ್ಲಿ ಕೊರೋನಾ ನಿಗಾ ಕೇಂದ್ರ ಬೇಡ : ಕರಿಂಜೆ ಶ್ರೀ

Update: 2020-03-15 16:28 GMT

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಕರಿಂಜೆಯಲ್ಲಿ ಘನತ್ಯಾಜ್ಯ ವಿಲೇವಾಗಿ ಘಟವು ಈ ಹಿಂದೆಯೇ ನಿರ್ಮಾಣವಾಗಿದ್ದು ಅದು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿಲ್ಲ. ಇದೀಗ  ಈ ಪ್ರದೇಶದಲ್ಲಿ ಖಾಸಗಿ ಕಟ್ಟಡವೊಂದರಲ್ಲಿ ಕೊರೋನಾ ವೈರಸ್ ಸೋಂಕಿತ ಶಂಕಿತರನ್ನು ಇರಿಸಲು ನಿಗಾ ಕೇಂದ್ರ ಬೇಡ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಪರಿಸರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಸಕ್ರಿಯವಾಗಿ ಕಾರ್ಯಚರಣೆ ನಡೆಸಲು ಜಾತಿ ಬೇಧವಿಲ್ಲದ, ರಾಜಕೀಯ ರಹಿತವಾದ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಬೇಕಾಗಿದೆ ಎಂದು ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಸಲಹೆ ನೀಡಿದರು.

ಅವರು ಜಿಲ್ಲಾಡಳಿತವು ಇಲ್ಲಿನ ಪುರಸಭಾ ವ್ಯಾಪ್ತಿಯ ಕರಿಂಜೆಯ ಸಿದ್ದತೆ ನಡೆಸುತ್ತಿದ್ದು ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ರವಿವಾರ ನಡೆಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಗ್ರಾಮಸ್ಥರಿಗೆ ಸರಿಯಾಗಿ ಮಾಹಿತಿ ನೀಡದೆ ಉಡಾಫೆಯಿಂದ ವರ್ತಿಸಿದ್ದಾರೆ. ಗ್ರಾಮಸ್ಥರಿಗೆ ಸಾಂತ್ವಾನ ಹೇಳಿ ಜಾಗೃತಿಯನ್ನು ನೀಡಿ ಕಾರ್ಯಪ್ರವೃತರಾಗಬೇಕಾಗಿತ್ತು. ಆದರೆ ಇದ್ಯಾವುದನ್ನೂ ಮಾಡದೆ ಗೊಂದಲವನ್ನು ನಿರ್ಮಿಸಿದ್ದಾರೆ. ಜನರು ಕೂಡಾ ಪೂರ್ವಾಪರ ತಿಳಿಯದೆ ಗೊಂದಲವನ್ನು ಮಾಡಬಾರದೆಂದು ಸಲಹೆ ನೀಡಿದ ಸ್ವಾಮೀಜಿ ಶಾಸಕರು ಇಲ್ಲಿ ಕೊರೋನಾ ನಿಗಾ ಕೇಂದ್ರವನ್ನು ಮಾಡಲು ಅವಕಾಶವನ್ನು ನೀಡುವುದಿಲ್ಲವೆಂದು ಈಗಾಗಲೇ ತಮಗೆ ಭರವಸೆಯನ್ನು ನೀಡಿದ್ದಾರೆಂದರು.

 ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಗ್ರಾಮಸ್ಥರ ಜೊತೆ ಮಾತನಾಡಿ ನಿಗಾ ಕೇಂದ್ರವನ್ನು ಈ ಪ್ರದೇಶದಲ್ಲಿ ತೆರೆಯಲು ಬಿಡುವುದಿಲ್ಲವೆಂದು ಭರವಸೆಯನ್ನು ನೀಡಿದರು.

ಪುರಸಭಾ ವಾರ್ಡ್ ಸದಸ್ಯರಾದ ಜಯಶ್ರೀ, ಸುರೇಶ್ ಕೋಟ್ಯಾನ್, ಜೊಸ್ಸಿ ಮಿನೇಜಸ್, ಕೊರೊನಾ ಸೋಂಕಿತರ ನಿಗಾ ಕೇಂದ್ರ ತೆರೆಯಲು ಜಿಲ್ಲಾಡಳಿತ ನಿರ್ಧರಿಸಿರುವ ಕಟ್ಟಡದ ಮಾಲಕ ಜೆರಾಲ್ಡ್ ಕ್ರಾಸ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಪುರಸಭಾ ಮಾಜಿ ಸದಸ್ಯ ಕೆ.ಕೃಷ್ಣರಾಜ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News