×
Ad

ಭೀಮಾ ಕೋರೆಗಾಂವ್ ಪ್ರಕರಣ: ನವ್ಲಾಖಾ, ತೇಲ್ತುಂಬ್ಡೆಗೆ ಜಾಮೀನು ನಿರಾಕರಿಸಿದ ಸುಪ್ರೀಂ

Update: 2020-03-16 20:30 IST

ಹೊಸದಿಲ್ಲಿ,ಮಾ.16: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾವೋವಾದಿ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಮಾನವಹಕ್ಕು ಹೋರಾಟಗಾರರಾದ ಗೌತಮ್ ನವ್ಲಾಖಾ ಹಾಗೂ ಆನಂದ ತೇಲ್ತುಂಬ್ಡೆ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂಕೋರ್ಟ್ ಸೋಮ ವಾರ ನಿರಾಕರಿಸಿದೆ. ಇವರಿಬ್ಬರ ವಿರುದ್ಧ ಅಕ್ರಮ ಚಟುವಟಿಕೆಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ತಮಗೆ ಬಂಧನಪೂರ್ವ ಜಾಮೀನು ನೀಡಬೇಕೆಂದು ಕೋರಿ ನವ್ಲಾಖಾ ಹಾಗೂ ತೇಲ್ತುಂಬ್ಡೆ ಅವರು ಸಲ್ಲಿಸಿದ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಫೆಬ್ರವರಿ 15ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಇವರಿಬ್ಬರು ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ರಜಾ ಕಾಲದ ಅರ್ಜಿಯನ್ನು ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್‌ಮಿಶ್ರಾ ಹಾಗೂ ಎಂ.ಆರ್.ಶಾ ನೇತೃತ್ವದ ನ್ಯಾಯಪೀಠವು, ಸೂಕ್ತ ಪುರಾವೆ ಗಳನ್ನು ಆಧರಿಸಿ ನವ್ಲಾಖಾ ಹಾಗೂ ತೇಲ್ತುಂಬ್ಡೆ ವಿರುದ್ಧ ಹೊರಿಸಲಾಗಿರುವ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಅವರಿಗೆ ಜಾಮೀನು ನೀಡಲು ನಿರಾಕರಿಸಿತು. ಆದಾಗ್ಯೂ ಆರೋಪಿಗಳು ಸಲ್ಲಿಸಿದ್ದ ಬಂಧನಪೂರ್ವ ಜಾಮೀನು ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಅವರ ಮಧ್ಯಂತರ ಜಾಮೀನನ್ನು ಮಾರ್ಚ್ 16ರವರೆ ವಿಸ್ತರಿಸಿತು.

    ಕ್ರಮವಾಗಿ ತೇಲ್ತುಂಬ್ಡೆ ಹಾಗೂ ನವ್ಲಾಖಾ ಅವರ ಪರವಾಗಿ ಅರ್ಜಿ ಸಲ್ಲಿಸಿದ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್ ಹಾಗೂ ಡಾ. ಅಭಿಷೇಕ್ ಮನು ಸಿಂಘ್ವಿ ಅವರು ಪ್ರಾಸಿಕ್ಯೂಶನ್ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ದೋಷಾರೋಪಣೆಯ ಪತ್ರಗಳು ಇನ್ನೋರ್ವ ವ್ಯಕ್ತಿಯಿಂದ ವಶಪಡಿಸಿಕೊಳ್ಳಲಾದುದೆಂದು ವಾದಿಸಿದರು. ತೇಲ್ತುಂಬ್ಡೆ ಹಾಗೂ ನವ್ಲಾಖಾ ಅವರು ಬೌದ್ಧಿಕ ಹಾಗೂ ಶೈಕ್ಷಣಿಕ ವಿಧಾನಗಳ ಮೂಲಕ ಆಡಳಿತವನ್ನು ಟೀಕಿಸುವ ಚಟುವಟಿಕೆಗಳಲ್ಲಿ ನಿರತರಾದ ಶಾಂತಿಪರ ಹೋರಾಟಗಾರರೆಂದು ಹೇಳಿದರು.

  ರಾಷ್ಟ್ರೀಯ ತನಿಖಾಸಂಸ್ಥೆಯ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆರೋಪಿಗಳನ್ನು ಕಸ್ಟಡಿಯಲ್ಲಿ ವಿಚಾರಣೆ ಗೊಳಪಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಆರೋಪಿಗಳು ನಿಷೇಧಿತ ಸಂಘಟನೆಗಳ ಜೊತೆ ಶಾಮೀಲಾಗಿದ್ದರು ಹಾಗೂ ಅವರು ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆಯಡಿ ದಾಖಲಾಗುವಂತಹ ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದನ್ನು ಸಾಬೀತುಪಡಿಸುವ ಪುರಾವೆಗಳು ಲಭ್ಯವಾಗಿವೆ ಎಂದು ವಾದಿಸಿದ್ದರು.

2018ರ ಜನವರಿ 1ರಂದು ಮಹಾರಾಷ್ಟ್ರದ ಭೀಮಾಕೋರೆಗಾಂವ್‌ನಲ್ಲಿ ನಡೆದ ದಲಿತ ಸಂಘಟನೆಗಳು ಆಯೋಜಿಸಿದ ಕೋರೆಗಾಂವ್ ಯುದ್ಧದ 200ನೇ ವರ್ಷಾ ಚರಣೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಇದರ ಹಿಂದಿನ ದಿನ ಎಲ್ಲಾರ್ ಪರಿಷತ್ ಪುಣೆಯಲ್ಲಿ ಆಯೋಜಿಸಿದ ಸಭೆಯು ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿತ್ತು ಎಂದು ಪೊಲೀಸರು ಆರೋಪಿಸಿದ್ದರು ಗೌತಮ್ ನವ್ಲಾಖಾ ಹಾಗೂ ಆನಂದ ತೇಲ್ತುಂಬ್ಡೆ ಸೇಹಿದಂತೆ ಈ ಸಭೆಯನ್ನು ಆಯೋಜಿಸಿದ್ದ ವ್ಯಕ್ತಿಗಳುೆ ನಿಷೇಧಿತ ಮಾವೊವಾದಿ ಸಂಘಟನೆಗಳ ಜೊತೆ ನಂಟು ಹೊಂದಿದ್ದರು ಎಂದು ಎನ್‌ಐಎ ಆಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News