ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳನ್ನು ನೀಡುವಂತೆ ಕೇಂದ್ರವನ್ನು ಕೇಳಿದ ರಾಹುಲ್

Update: 2020-03-16 15:12 GMT

ಹೊಸದಿಲ್ಲಿ,ಮಾ.16: ದೇಶದಲ್ಲಿನ 50 ಪ್ರಮುಖ ಉದ್ದೇಶಪೂರ್ವಕ ಬ್ಯಾಂಕ್‌ಸಾಲ ಸುಸ್ತಿದಾರರ ವಿವರಗಳನ್ನು ಒದಗಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಲೋಕಸಭೆಯಲ್ಲಿ ಸರಕಾರವನ್ನು ಆಗ್ರಹಿಸಿದರು.

ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಯಾವುದೇ ಉತ್ತರವನ್ನು ತಾನು ಸ್ವೀಕರಿಸಿಲ್ಲ ಎಂದು ಅವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ವಿತ್ತಸಚಿವ ಅನುರಾಗ್ ಠಾಕೂರ್ ಅವರು,ಕೇಂದ್ರ ಮಾಹಿತಿ ಆಯೋಗದ ಜಾಲತಾಣದಲ್ಲಿ ಎಲ್ಲ ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳ ಪಟ್ಟಿ ಲಭ್ಯವಿದೆ ಎಂದು ತಿಳಿಸಿದರು.

 ಉದ್ದೇಶಪೂರ್ವಕ ಸುಸ್ತಿದಾರರ ಕುರಿತು ತನ್ನ ಪ್ರಶ್ನೆಗೆ ಎರಡನೇ ಪೂರಕ ಪ್ರಶ್ನೆಯನ್ನು ಕೇಳಲು ತನಗೆ ಅವಕಾಶ ನೀಡಲಾಗಿಲ್ಲ ಎಂದು ರಾಹುಲ್ ಆರೋಪಿಸಿದಾಗ ಸದನದಲ್ಲಿ ಕೋಲಾಹಲ ಆರಂಭಗೊಂಡಿತು. ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಾಹ್ನ 12 ಗಂಟೆಗೆ ಪ್ರಶ್ನೆವೇಳೆಯು ಅಂತ್ಯಗೊಂಡಿದೆ ಎಂದು ಪ್ರಕಟಿಸಿದಾಗ ಇದನ್ನು ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.

ಅತ್ತ ರಾಜ್ಯಸಭೆಯಲ್ಲಿ ಸದಸ್ಯರು ಕೊರೋನವೈರಸ್ ಸಾಂಕ್ರಾಮಿಕ ಪಿಡುಗಿನ ಕುರಿತು ಚರ್ಚಿಸಿದರು.

                                     

ತೃಣಮೂಲ ಕಾಂಗ್ರೆಸ್ ಸದಸ್ಯ ಡೆರೆಕ್ ಒ’ಬ್ರಿಯೆನ್ ಅವರು ಕೈಗಳನ್ನು ಹೇಗೆ ತೊಳೆದುಕೊಳ್ಳಬೇಕು ಎಂಬ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು. ಇದಕ್ಕೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಖಂಡನೆ ವ್ಯಕ್ತಪಡಿಸಿದಾಗ ತನ್ನ ಕೈಗಳನ್ನು ಜೋಡಿಸಿದ ಒ’ಬ್ರಿಯೆನ್ ಭಾಷಣವನ್ನು ಮುಂದುವರಿಸಿದರು. ಸಂಸತ್ತಿನ ಪ್ರವೇಶದ್ವಾರಗಳಲ್ಲಿ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಎಸ್‌ಪಿ ಸದಸ್ಯ ರಾಮಗೋಪಾಲ ಯಾದವ ಸಲಹೆ ನೀಡಿದರೆ,ಮುಂಗಡಪತ್ರ ಅಧಿವೇಶನದ ಬಾಕಿ ಉಳಿದಿರುವ ಅವಧಿಯನ್ನು ಮಂಗಳವಾರದಿಂದ ಮುಂದೂಡಲು ಸರಕಾರವು ಸಿದ್ಧವಿದೆಯೇ ಎಂದು ಎಐಎಡಿಎಂಕೆ ಸದಸ್ಯ ಎಸ್.ಆರ್. ಬಾಲಸುಬ್ರಮಣಿಯನ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News