×
Ad

ಮೇರಿಹಿಲ್: ಸರಕಾರಿ ಸಂಸ್ಥೆಯ ಗ್ಯಾರೇಜ್ ಬಂದ್

Update: 2020-03-16 21:17 IST

ಮಂಗಳೂರು, ಮಾ.16: ನಗರದ ಮೇರಿಹಿಲ್-ಹೆಲಿಪ್ಯಾಡ್ ರಸ್ತೆ ಬದಿಯಲ್ಲಿ ರಾಜ್ಯ ಸರಕಾರದ ಕೇಂದ್ರ ಯಾಂತ್ರಿಕ ಸಂಸ್ಥೆ (ಸೆಂಟ್ರಲ್ ಮೆಕ್ಯಾನಿಕಲ್ ಆರ್ಗನೈಸೇಶನ್) ಅಂದರೆ ಗ್ಯಾರೇಜ್ ಬಂದ್ ಅಗಿ ಬರೋಬ್ಬರಿ 17 ವರ್ಷಗಳೇ ಕಳೆದಿವೆ. 2003ರಲ್ಲಿ ನಿರ್ಮಿಸಿದ ಈ ವರ್ಕ್‌ಶಾಪ್ ಸುಸಜ್ಜಿತ ಕಟ್ಟಡದಿಂದ ಕೂಡಿದೆ.

ಈ ವರ್ಕ್‌ಶಾಪ್ ಮೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿವೆ. ಅಂದರೆ ದ.ಕ., ಉಡುಪಿ, ಕೊಡಗು ಜಿಲ್ಲೆಗಳ ವ್ಯಾಪ್ತಿಯ ಬೃಹತ್ ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯು ಲಾರಿ, ಟಿಪ್ಪರ್, ರೋಡ್ ರೋಲರ್, ಜೀಪ್ ಇತ್ಯಾದಿ ವಾಹನಗಳನ್ನು ದುರಸ್ತಿ ಮಾಡಲೆಂದು ಈ ವರ್ಕ್‌ಶಾಪ್‌ನ್ನು 2003ರಲ್ಲಿ ತೆರೆದಿತ್ತು. ಆದರೆ ಇನ್ನೂ ಇದರ ಉದ್ದೇಶ ಈಡೇರಿಲ್ಲ. ಇದಕ್ಕೆ ಅಧಿಕಾರಿಗಳ ನಿರಾಸಕ್ತಿಯೇ ಕಾರಣ ಎಂದು ಹೇಳಲಾಗುತ್ತಿದೆ. ಅಂದಹಾಗೆ ಇದಕ್ಕೊಬ್ಬ ಕನಿಷ್ಠ ಮೆಕ್ಯಾನಿಕ್ ಕೂಡ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದುರಸ್ತಿಗೆ ವಾಹನವೂ ಬಾರದಿರುವುದು ವಿಪರ್ಯಾಸ.

ಕಾವಲುಗಾರ ಮಾತ್ರ

ವರ್ಕ್‌ಶಾಪ್‌ನ ಆವರಣ ಪ್ರವೇಶಿಸಿದರೆ ಒಂದು ಬೋರ್ಡ್ ಮತ್ತು ಒಬ್ಬ ಕಾವಲುಗಾರನನ್ನು ಕಾಣಬಹುದಾಗಿದೆ. ಕೋಣೆಯೊಳಗಿನ ಗೋಡೆಯಲ್ಲಿ ಉದ್ಘಾಟನೆ ಕಾರ್ಯಕ್ರಮದ ಫೋಟೋಗಳನ್ನು ಅಳವಡಿಸಲಾಗಿದೆ. ಆರಂಭದ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಕೆಲವು ವಾಹನಗಳನ್ನು ದುರಸ್ತಿ ಮಾಡಿದ ಬಗ್ಗೆ ದಾಖಲೆಗಳಿವೆ. ಅದು ಬಿಟ್ಟರೆ ಬೇರೇನೂ ಇಲ್ಲ. ಈ ವರ್ಕ್‌ಶಾಪ್‌ನ ಕೋಣೆಯೊಂದರಲ್ಲಿ ಕಾವಲುಗಾರನ ಕುಟುಂಬ ವಾಸ್ತವ್ಯ ಹೂಡಿವೆ.

ವರ್ಕ್‌ಶಾಪ್ ನಿರ್ಮಿಸಿದ ಇಲಾಖೆ ಬಳಿಕ ಇಲ್ಲಿಗೆ ಮೆಕ್ಯಾನಿಕ್ ಸೇರಿದಂತೆ ಯಾವುದೇ ಸಿಬ್ಬಂದಿ ನೇಮಕ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸೂಕ್ತ ಮೆಕ್ಯಾನಿಕ್ ಇಲ್ಲದ ಕಾರಣ ದುರಸ್ತಿಗೆ ವಾಹನವೂ ಬಂದಿಲ್ಲ. ಹಾಗಾಗಿ ಕಳೆದ 17 ವರ್ಷದಿಂದ ಈ ಗ್ಯಾರೇಜ್‌ನ ಗೇಟ್ ತೆರೆದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲೊಂದು ಸರಕಾರಿ ಸಂಸ್ಥೆಯ ಗ್ಯಾರೇಜ್ ಇದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಕಾರಣ ಏನು ?

ದ.ಕ.ಜಿಲ್ಲೆಯಲ್ಲಿ ಬೃಹತ್ ನೀರಾವರಿ ಇಲಾಖೆಗೆ ಸದ್ಯ ಯಾವುದೇ ಯೋಜನೆಗಳಿಲ್ಲ. ಇನ್ನು ಲೋಕೋಪಯೋಗಿ ಇಲಾಖೆಯ ಹಳೆಯ ವಾಹನಗಳನ್ನು ಗುತ್ತಿಗೆದಾರರು ಬಾಡಿಗೆಗೆ ಪಡೆಯುತ್ತಿಲ್ಲ. ಇಲಾಖೆಯಲ್ಲಿ ವಾಹನಗಳ ಸಂಖ್ಯೆಯೂ ಕಡಿಮೆಯಾಗಿದೆ. ಲಭ್ಯ ವಾಹನಗಳನ್ನು ಖಾಸಗಿ ಗ್ಯಾರೇಜ್‌ಗಳಲ್ಲಿ ದುರಸ್ತಿ ಮಾಡಲಾಗುತ್ತದೆ. ಹಾಗಾಗಿ ಮೇರಿಹಿಲ್‌ನಲ್ಲಿರುವ ಗ್ಯಾರೇಜ್ ಇದ್ದೂ ಇಲ್ಲದಂತಿವೆ.

ಇಲಾಖೆಯಲ್ಲಿ ಮೆಕ್ಯಾನಿಕ್ ನೇಮಕಾತಿಯೇ ಆಗುತ್ತಿಲ್ಲ. ಹಾಗಾಗಿ ಈ ಗ್ಯಾರೇಜ್‌ಗೆ ಕೂಡ ಮೆಕ್ಯಾನಿಕ್ ನೇಮಕ ಆಗಿಲ್ಲ. ಇದರಿಂದ ಕಳೆದ ಹಲವು ವರ್ಷಗಳಿಂದ ಈ ಗ್ಯಾರೇಜ್ ಬಂದ್ ಆಗಿದೆ. ಮೆಕ್ಯಾನಿಕ್ ನೇಮಕ ಮಾಡಿ ಗ್ಯಾರೇಜನ್ನು ಮತ್ತೆ ಆರಂಭಿಸುವ ಸಲುವಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ಇಲಾಖೆಯ ವಾಹನಗಳನ್ನು ಖಾಸಗಿ ಗ್ಯಾರೇಜ್‌ಗಳಲ್ಲಿ ದುರಸ್ತಿ ಮಾಡಲಾಗುತ್ತಿದೆ.

- ದೇವಿಪ್ರಸಾದ್ , ಜೂನಿಯರ್ ಇಂಜಿನಿಯರ್
ಕೇಂದ್ರ ಯಾಂತ್ರಿಕ ಸಂಸ್ಥೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News