ಮಂಗಳೂರಿಗೆ ತಟ್ಟದ ‘ಕೊರೋನ’ ಬಂದ್ ಬಿಸಿ
ಮಂಗಳೂರು, ಮಾ.16: ಕೊರೋನ ವೈರಸ್ ಭೀತಿಯ ಹಿನ್ನಲೆಯಲ್ಲಿ ರಾಜ್ಯ ಸರಕಾರ ಶನಿವಾರದಿಂದ ಅನ್ವಯಗೊಂಡಂತೆ ಒಂದು ವಾರ ಕರ್ನಾಟಕದಾದ್ಯಂತ ಸಿನೆಮಾ ಮಂದಿರಗಳು, ರಂಗಮಂದಿರಗಳು, ಪಬ್‌ಗಳು, ಮಾಲ್‌ಗಳು, ನೈಟ್‌ಕ್ಲಬ್‌ಗಳು, ವಸ್ತುಪ್ರದರ್ಶನ, ಸ್ವಿಮ್ಮಿಂಗ್ ಫೂಲ್, ಮ್ಯಾರಥಾನ್ ಸಹಿತ ಜನರು ಅತೀ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸುವ ಕಾರ್ಯಕ್ರಮ ಗಳಿಗೆ ನಿರ್ಬಂಧ ಹೇರಿ ಘೋಷಿತ ‘ಬಂದ್’ಗೆ ಸೂಚನೆ ನೀಡಿದೆ. ಆದರೆ, ಸೋಮವಾರ ಮಂಗಳೂರು ನಗರರಾದ್ಯಂತ ಯಥಾ ಸ್ಥಿತಿ ಕಂಡು ಬಂದಿದ್ದು, ಕೊರೋನ ‘ಬಂದ್’ನ ಬಿಸಿ ಮಂಗಳೂರಿಗೆ ತಟ್ಟಿದಂತಿಲ್ಲ.
ನಗರದ ಮಾಲ್‌ಗಳು, ಚಲನ ಚಿತ್ರಮಂದಿರಗಳು, ಬೀದಿಬದಿಯ ಫಾಸ್ಟ್‌ಫುಡ್ ಸಹಿತ ಇತರ ಬಗೆಯ ತಿಂಡಿ ತಿನಿಸುಗಳ ಅಂಗಡಿ ಗಳು ಮುಚ್ಚಲ್ಪಟ್ಟಿವೆ. ಪಿಲಿಕುಳ ನಿಸರ್ಗಧಾಮದೊಳಗೆ ಪ್ರವೇಶ ನಿರ್ಬಂಧ ಹೇರಿರುವುದರಿಂದ ಅಲ್ಲಿಗೆ ಪ್ರವಾಸಿಗರು ಭೇಟಿ ನೀಡಿಲ್ಲ. ಉಳಿದಂತೆ ಕರಾವಳಿಯ ಪ್ರಮುಖ ಬೀಚ್‌ಗಳಲ್ಲೂ ಕೂಡ ಜನರ ಓಡಾಟ ಹೆಚ್ಚು ಕಾಣಿಸಲಿಲ್ಲ. ಬಹುತೇಕ ಮದುವೆ ಹಾಲ್‌ಗಳು ಬಿಕೋ ಎನುತ್ತಿತ್ತು. ಅಧಿಕ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುವ ಸರಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು.
ಆದರೆ ಬಸ್ ಸಂಚಾರ ಎಂದಿನಂತಿತ್ತು. ಅಂಗಡಿ ಮುಂಗಟ್ಟುಗಳು ತೆರೆದಿತ್ತು. ಸರಕಾರಿ ಕಚೇರಿಗಳು ಕೂಡ ಎಂದಿನಂತೆ ಕಾರ್ಯಾಚರಿಸುತ್ತಿತ್ತು. ಆ ಮೂಲಕ ‘ಮಂಗಳೂರು’ಗೆ ಕೊರೋನ ಬಂದ್/ ನಿರ್ಬಂಧದ ಬಿಸಿ ತಾಗದೆ ಸಹಜ ಸ್ಥಿತಿಯಲ್ಲಿತ್ತು.