ಮಾಜಿ ಸಿಜೆಐ ರಂಜನ್ ಗೊಗೊಯಿಯವರನ್ನು ರಾಜ್ಯಸಭೆಗೆ ನಾಮಕರಣಗೊಳಿಸಿದ ರಾಷ್ಟ್ರಪತಿ

Update: 2020-03-16 18:27 GMT

ಹೊಸದಿಲ್ಲಿ,ಮಾ.16: ಅಭೂತಪೂರ್ವ ಬೆಳವಣಿಗೆಯೊಂದರಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರವು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ರಾಜ್ಯಸಭೆಯಲ್ಲಿ ಸ್ಥಾನ ಕಲ್ಪಿಸಿದೆ. ಗೊಗೊಯಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ರಾಷ್ಟ್ರಪತಿಗಳು ಸೋಮವಾರ ನಾಮಕರಣಗೊಳಿಸಿದ್ದು,ಈ ಬಗ್ಗೆ ಗೃಹಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದೆ.

ಸರಕಾರವೊಂದು ಮಾಜಿ ಸಿಜೆಐ ಅನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣಗೊಳಿಸಿದ್ದು ಇದೇ ಮೊದಲ ಬಾರಿಯಾಗಿದ್ದು,ವಿಶೇಷವಾಗಿ ಇದೇ ಸರಕಾರವು ಮಹತ್ವದ ರಾಜಕೀಯ ಹಿತಾಸಕ್ತಿಗಳನ್ನು ಹೊಂದಿದ್ದ ಪ್ರಮುಖ ಪ್ರಕರಣಗಳಲ್ಲಿ ವಿಚಾರಣಾ ಪೀಠಗಳ ನೇತೃತ್ವವನ್ನು ನ್ಯಾ.ಗೊಗೊಯಿ ಅವರೇ ವಹಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮವು ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವಿನ ಅಧಿಕಾರಗಳ ಸಾಂವಿಧಾನಿಕ ಪ್ರತ್ಯೇಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಲಿದೆ. ರಫೇಲ್ ವಿವಾದ, ಸಿಬಿಐ ನಿರ್ದೇಶಕ ಅಲೋಕ ವರ್ಮಾರ ವಜಾ,ಅಯೋಧ್ಯೆ ವಿಷಯ ಇತ್ಯಾದಿ ಈ ಪ್ರಮುಖ ಪ್ರಕರಣಗಳಲ್ಲಿ ಸೇರಿವೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಿರಿಯ ನ್ಯಾಯವಾದಿ ಹಾಗೂ ಸರ್ವೋಚ್ಚ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ದುಷ್ಯಂತ ದವೆ ಅವರು,ಇದು ಅತ್ಯಂತ ಅಸಹ್ಯಕರ. ಕೊಟ್ಟು ತೆಗೆದುಕೊಳ್ಳುವ ವ್ಯವಹಾರದ ಸ್ಪಷ್ಟ ಪುರಸ್ಕಾರವಾಗಿದೆ. ನ್ಯಾಯಾಂಗದ ಸ್ವಾತಂತ್ರವನ್ನು ಸಂಪೂರ್ಣವಾಗಿ ನಾಶ ಮಾಡಿದಂತಾಗಿದೆ ಎಂದು ಹೇಳಿದರು.

ಮಾಜಿ ಸಿಜೆಐ ಓರ್ವರು ರಾಜ್ಯಸಭಾ ಸದಸ್ಯರಾಗಿರುವುದು ಇದೇ ಮೊದಲ ಬಾರಿಯೇನಲ್ಲ. 1992ರಲ್ಲಿ ಸಿಜೆಐ ಹುದ್ದೆಯಿಂದ ನಿವೃತ್ತರಾಗಿದ್ದ ನ್ಯಾ.ರಂಗನಾಥ ಮಿಶ್ರಾ ಅವರು 1998ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಆಯ್ಕೆಯಾಗಿ ರಾಜ್ಯಸಭಾ ಸದಸ್ಯರಾಗಿದ್ದರು,ಆದರೆ ಆಗ ಕಾಂಗ್ರೆಸ್ ಅಧಿಕಾರದಲ್ಲಿರಲಿಲ್ಲ. ಆಗಲೂ ಅವರ ನೇಮಕ ವಿವಾದದಿಂದ ಹೊರತಾಗಿರಲಿಲ್ಲ. 1984ರ ಸಿಖ್ ನರಮೇಧದ ತನಿಖೆ ಡೆಸಿದ್ದ ನ್ಯಾ.ರಂಗನಾಥ ಮಿಶ್ರಾ ಆಯೋಗದ ಮುಖ್ಯಸ್ಥರಾಗಿ ಅವರು ಹಿರಿಯ ಕಾಂಗ್ರೆಸ್ ನಾಯಕರ ರಾಜಕೀಯ ಅಪರಾಧಿತ್ವವನ್ನು ಮುಚ್ಚಿ ಹಾಕಿದ್ದಕ್ಕಾಗಿ ಅವರಿಗೆ ಈ ಸದಸ್ಯತ್ವ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೂ ಮುನ್ನ ಆಗಿನ ನರಸಿಂಹರಾವ್ ಸರಕಾರವು ಅವರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷತೆಯನ್ನು ಉಡುಗೊರೆಯಾಗಿ ನೀಡಿತ್ತು.

ಸಿಜೆಐ ಆಗಿ ನ್ಯಾ.ಗೊಗೊಯಿ ಅವರ ಅಧಿಕಾರಾವಧಿಯು ಸರ್ವೋಚ್ಚ ನ್ಯಾಯಾಲಯದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಸೇರಿದಂತೆ ಹಲವಾರು ವಿವಾದಗಳಿಂದ ಕೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News