ಮಕ್ಕಳ ರಕ್ಷಣಾ ಘಟಕದಿಂದ ಕೋವಿಡ್-19 ಅರಿವು
ಉಡುಪಿ, ಮಾ.16: ಉಡುಪಿ ಜಿಲ್ಲೆಯ ನಿಟ್ಟೂರಿನಲ್ಲಿರುವ ಬಾಲಕಿಯರ ಬಾಲಮಂದಿರ, ವೀಕ್ಷಣಾಲಯ ಹಾಗೂ ಸಿಎಸ್‌ಐ ಬಾಯ್ಸ ಹೋಂ, ಉಡುಪಿ ಇಲ್ಲಿನ ಪಾಲನಾ ಸಂಸ್ಥೆಗಳಿಗೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್ ಸೋಮವಾರ ಭೇಟಿ ನೀಡಿ, ಕೋವಿಡ್-19 ವೈರಸ್ ಬಗ್ಗೆ ಮಕ್ಕಳು ಹಾಗೂ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ತೆಗೆದುಕೊಳ್ಳಬೇಕಾದ ಜಾಗೃತಾ ಕ್ರಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಮಕ್ಕಳು ಇತರರನ್ನು ಭಾರತೀಯ ಸಂಪ್ರದಾಯದಂತೆ ನಮಸ್ತೆ ಮೂಲಕ ಕೈಜೋಡಿಸಿ ಸ್ವಾಗತಿಸಬೇಕು. ಯಾವುದೇ ಕಾರಣಕ್ಕೂ ಹಸ್ತ ಲಾಘವ ಅಥವಾ ಅಪ್ಪುಗೆ ಮಾಡಬಾರದು. ಕೊರೋನಾ ವೈರಸ್ ಸೀನಿದಾಗ ಮತ್ತು ಕೆಮ್ಮಿದಾಗ ಇತರರಿಗೆ ಹರಡುವ ಸಾಧ್ಯತೆ ಇರುವುದರಿಂದ ಅಂತಹ ಸಂದರ್ಗಳಲ್ಲಿ ನಾವು ಕರವಸ್ತ್ರವನ್ನು ಮೂಗು ಮತ್ತು ಬಾಯಿಗೆ ಅಡ್ಡವಾಗಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣು, ಬಾಯಿ ಮತ್ತು ಮೂಗನ್ನು ಕೈಗಳಿಂದ ಮುಟ್ಟಬಾರದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಎಂದರು.
ಜನಜಂಗುಳಿ ಇರುವ ಜಾತ್ರೆ, ಹಬ್ಬ, ಹರಿದಿನ, ಮದುವೆ ಇತರೆ ಕಾರ್ಯಕ್ರಮಗಳಿಗೆ ಮಕ್ಕಳು ಹಾಜರಾಗುವುದನ್ನು ನಿಲ್ಲಿಸಬೇಕು. ನಿವಾಸಿಗಳಲ್ಲಿ ಯಾವೊಬ್ಬ ಮಗುವಿಗೆ ತೀವ್ರವಾದ ಜ್ವರ ಕೆಮ್ಮು, ಕೈಕಾಲು ಸೆಳೆತ ಮುಂತಾದ ಕೊರೋನ ಕಾಯಿಲೆಯ ಲಕ್ಷಣಗಳು ತೋರಿದಲ್ಲಿ ತಕ್ಷಣ ವೈದ್ಯಾಧಿಕಾರಿಗಳ ಸಲಹೆ ಪಡೆದು ಅಗತ್ಯಬಿದ್ದರೆ ಪ್ರತ್ಯೇಕಿಸಿ ಚಿಕಿತ್ಸೆ ನೀಡಬೇಕು. ಮಕ್ಕಳು ಸಾಧ್ಯವಾದಷ್ಟು ಬಿಸಿ ಬಿಸಿಯಾದ ಆಹಾರ ಪದಾರ್ಥವನ್ನು ಸೇವಿಸಬೇಕು. ಹಾಗೂ ಶೀತ ಕೆಮ್ಮ, ನೆಗಡಿ ಬಾರದಂತೆ ಜಾಗೃತೆ ವಹಿಸಿ ಅನಾವಶ್ಯಕ ಭೀತಿ ತಲೆದೋರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಉಡುಪಿ ಜಿಲ್ಲೆಗೆ ವಿದೇಶಗಳಿಂದ ಬರುವ ಯಾತ್ರಾರ್ಥಿಗಳು ಮತ್ತು ಸ್ಥಳೀಯರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಸಾಧ್ಯವಾದಷ್ಟು ಮಕ್ಕಳು ಅವರ ಸಂಪರ್ಕದಿಂದ ದೂರವಿರಬೇಕು. ಸಂಸ್ಥೆಯವರು ಅಂತಹವರನ್ನು ಸಂಸ್ಥೆಗೆ ಭೇಟಿ ನೀಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ ಮತ್ತಿತರರು ಉಪಸ್ಥಿತರಿದ್ದರು.