ಕೋರಿಯರ್ ವಸ್ತುವಿಗಾಗಿ ಹಣ ಕಳೆದುಕೊಂಡ ಮಹಿಳೆ !
ಉಡುಪಿ, ಮಾ.16: ತಲುಪದ ಕೋರಿಯರ್ ವಸ್ತುವಿಗಾಗಿ ಗೂಗಲ್‌ನಲ್ಲಿ ಪಡೆದುಕೊಂಡ ಮೊಬೈಲ್ ನಂಬರ್‌ಗೆ ಕರೆ ಮಾಡಿದ ಮಹಿಳೆಯೊಬ್ಬರು, ತನ್ನ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಎಸ್‌ಬಿಐ ಲೈಫ್ ಇನ್ಸೂರೆನ್ಸ್ ಉಡುಪಿ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿ ರುವ ಕಾಡಬೆಟ್ಟು ನಿವಾಸಿ ಸಿತಾರ(32) ಎಂಬವರ ಪತಿ ಪ್ರಶಾಂತ್ ಅತ್ತಾವರ, ಕೊರಿಯರ್ ಮೂಲಕ ಮನೆಗೆ 3 ವಸ್ತುಗಳನ್ನು ಕಳುಹಿಸಿದ್ದು ಅದರಲ್ಲಿ ಸಿತಾರ ಎರಡು ವಸ್ತುಗಳನ್ನು ಸ್ವೀಕರಿಸಿದ್ದರು.
ಇನ್ನೊಂದು ವಸ್ತು ಪಡೆಯಲು ಉಡುಪಿಯ ಕೊರಿಯರ್ ಕಚೇರಿ ನಂಬರನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದು, ಅಲ್ಲಿ ದೊರೆತ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿಯೊಬ್ಬ ಇವರನ್ನು ನಂಬಿಸಿ ಇವರ ಮೊಬೈಲ್ ನಂಬರ್‌ಗೆ ಲಿಂಕ್ ಕಳುಹಿಸಿದ್ದನು.
ಆ ಲಿಂಕ್ ಓಪನ್ ಮಾಡಿದಾಗ ಸಿತಾರ ಅವರ ಎಚ್‌ಡಿಎಫ್‌ಸಿ ಬ್ಯಾಂಕ್ ಉಡುಪಿ ಶಾಖೆಯ ಖಾತೆಯಿಂದ 49,999ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಲಾಯಿತು. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.