ಕೊರೋನವೈರಸ್ ಲಸಿಕೆ ಮಾರಾಟಕ್ಕಿಲ್ಲ: ಜರ್ಮನಿ

Update: 2020-03-16 17:54 GMT

 (ಜರ್ಮನಿ), ಮಾ. 16: ಕೊರೋನವೈರಸ್ ಲಸಿಕೆ ಸಂಶೋಧನೆ ಕುರಿತ ಹಕ್ಕುಗಳನ್ನು ಮಾರಾಟ ಮಾಡಲಾಗುವುದಿಲ್ಲ ಎಂದು ಜರ್ಮನಿಯ ವಿದೇಶ ಸಚಿವ ಹೈಕೊ ಮಾಸ್ ಸೋಮವಾರ ಹೇಳಿದ್ದಾರೆ. ಜರ್ಮನಿಯ ಜೈವಿಕ ತಂತ್ರಜ್ಞಾನ ಕಂಪೆನಿಯೊಂದು ಅಭಿವೃದ್ಧಿಪಡಿಸಿರುವ ಸಂಭಾವ್ಯ ಕೊರೋನವೈರಸ್ ಲಸಿಕೆಯ ಸಂಪೂರ್ಣ ಹಕ್ಕುಗಳನ್ನು ಖರೀದಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿರುವ ಇಚ್ಛೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಜಗತ್ತಿನಾದ್ಯಂತ ಈವರೆಗೆ 6,000ಕ್ಕೂ ಅಧಿಕ ಜನರನ್ನು ಕೊಂದಿರುವ ಮಾರಕ ಸಾಂಕ್ರಾಮಿಕ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಜಗತ್ತಿನಾದ್ಯಂತ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿರುವಂತೆಯೇ, ಜರ್ಮನಿ ವಿದೇಶ ಸಚಿವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

‘‘ಔಷಧ ಮತ್ತು ಲಸಿಕೆ ಅಭಿವೃದ್ಧಿಯಲ್ಲಿ ಜರ್ಮನಿ ಸಂಶೋಧಕರು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಅದರ ಫಲಿತಾಂಶಗಳನ್ನು ಪಡೆಯಲು ನಾವು ಇತರರಿಗೆ ಅನುಮತಿ ನೀಡುವುದಿಲ್ಲ’’ ಎಂದು ಹೈಕೊ ಮಾಸ್ ಹೇಳಿದರು.

ಜರ್ಮನ್ ಜೈವಿಕ ತಂತ್ರಜ್ಞಾನ ಸಂಸ್ಥೆ ‘ಕ್ಯೂರ್‌ವಾಕ್’ನ ಸಂಶೋಧನೆಯನ್ನು ಕೇವಲ ಅಮೆರಿಕಕ್ಕಾಗಿ ಬಳಸಿಕೊಳ್ಳಲು ಬಿಲಿಯ ಡಾಲರ್‌ಗಳನ್ನು ನೀಡಲು ಮುಂದಾಗಿದ್ದಾರೆ ಎಂದು ಜರ್ಮನ್ ಸರಕಾರಕ್ಕೆ ನಿಕಟವಾಗಿರುವ ಮೂಲವೊಂದನ್ನು ಉಲ್ಲೇಖಿಸಿ ‘ಡೈ ವೆಲ್ಟ್’ ಪತ್ರಿಕೆ ಈ ಹಿಂದೆ ವರದಿ ಮಾಡಿತ್ತು.

‘‘ಜರ್ಮನಿ ಮಾರಾಟಕ್ಕಿಲ್ಲ’’ ಎಂದು ಈ ವರದಿಗೆ ಹಣಕಾಸು ಸಚಿವ ಪೀಟರ್ ಆಲ್ಟಮೇಯರ್ ರವಿವಾರ ಪ್ರತಿಕ್ರಿಯಿಸಿದ್ದಾರೆ.

ಕ್ಯೂರ್‌ವಾಕ್ ಮುಖ್ಯಾಧಿಕಾರಿಯ ನಿಗೂಢ ಅಮೆರಿಕ ಭೇಟಿ

2000ದಲ್ಲಿ ಸ್ಥಾಪನೆಯಾಗಿರುವ ಜೈವಿಕ ತಂತ್ರಜ್ಞಾನ ಸಂಸ್ಥೆ ಕ್ಯೂರ್‌ವಾಕ್‌ನ ಪ್ರಧಾನ ಕಚೇರಿ ಜರ್ಮನಿಯ ತುರಿಂಗಿಯ ರಾಜ್ಯದಲ್ಲಿದೆ. ಅದರ ಶಾಖೆಗಳು ಜರ್ಮನಿಯ ಫ್ರಾಂಕ್‌ಫರ್ಟ್ ಮತ್ತು ಅಮೆರಿಕದ ಬೋಸ್ಟನ್‌ಗಳಲ್ಲಿವೆ.

ಕಂಪೆನಿಯ ಪ್ರಯೋಗಾಲಯವು ಪ್ರಸಕ್ತ ಜರ್ಮನಿಯ ಆರೋಗ್ಯ ಸಚಿವಾಲಯದೊಂದಿಗೆ ನಂಟು ಹೊಂದಿರುವ ಪೌಲ್ ಎರ್ಲಿಚ್ ಇನ್‌ಸ್ಟಿಟ್ಯೂಟ್‌ನ ಜೊತೆಗೆ ಕೆಲಸ ಮಾಡುತ್ತಿದೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇನಿಯಲ್ ಮೆನಿಶೆಲ್ಲರ ಸ್ಥಾನದಲ್ಲಿ ಇಂಗ್‌ಮರ್ ಹೋರ್‌ರನ್ನು ನೇಮಿಸಲಾಗಿದೆ ಎಂಬುದಾಗಿ ಕಂಪೆನಿಯು ಕಳೆದ ವಾರ ನಿಗೂಢವಾಗಿ ಪ್ರಕಟಿಸಿತ್ತು. ಮೆನಿಶೆಲ್ಲ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ವಾಶಿಂಗ್ಟನ್‌ನಲ್ಲಿರುವ ಔಷಧ ಕಂಪೆನಿಗಳ ಪ್ರತಿನಿಧಿಗಳನ್ನು ಭೇಟಿಯಾದ ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ.

‘‘ಕೆಲವೇ ತಿಂಗಳುಗಳಲ್ಲಿ ಕೊರೋನವೈರಸ್‌ಗೆ ನಾವು ಸಂಭಾವ್ಯ ಪ್ರಭಾವಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲು ಸಮರ್ಥರಾಗುತ್ತೇವೆ ಎಂಬ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ’’ ಎಂದು ಮೆನಿಶೆಲ್ಲರ ಅಮೆರಿಕ ಭೇಟಿಯ ಬಳಿಕ ಕ್ಯೂರ್‌ವಾಕ್ ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News