ಕಂಕನಾಡಿ ಮಾರುಕಟ್ಟೆಯ ತಾತ್ಕಾಲಿಕ ಕಟ್ಟಡದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ

Update: 2020-03-17 08:34 GMT

ಮಂಗಳೂರು, ಮಾ.17: ಕಂಕನಾಡಿ ಮಾರುಕಟ್ಟೆಯ ತಾತ್ಕಾಲಿಕ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಕೂಡ ಕೆಲವು ಕುಂದುಕೊರತೆಗಳಿವೆ. ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಮತ್ತು ಆ ಬಳಿಕವೇ ವ್ಯಾಪಾರಸ್ಥರ ಸ್ಥಳಾಂತರ ಮಾಡಬೇಕು ಎಂದು ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘದ ನಿಯೋಗ ಸೋಮವಾರ ಮೇಯರ್‌ಗೆ ಮನವಿ ಸಲ್ಲಿಸಿದೆ.

ಮೆಸ್ಕಾಂ ವಠಾರ ಮತ್ತು ತಾತ್ಕಾಲಿಕ ಮಾರುಕಟ್ಟೆಯ ನಡುವೆ ಇರುವ ಗೂಡಂಗಡಿಯನ್ನು ತೆರವುಗೊಳಿಸಿ ಮಾರುಕಟ್ಟೆಗೆ ಬರುವ ಹಾದಿಯನ್ನು ಸುಗಮಗೊಳಿಸಬೇಕು, ತಾತ್ಕಾಲಿಕ ಮಾರುಕಟ್ಟೆಯ ಗ್ರಾಹಕರ ವಾಹನಗಳ ನಿಲುಗಡೆಗೆ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ ಮಾಡಿ ಹೊರಗಿನ ವಾಹನಗಳು ಬಾರದಂತೆ ಪಾರ್ಕಿಂಗ್ ಪ್ರದೇಶದಲ್ಲಿ ಮಾರ್ಕಿಂಗ್ ಮಾಡಬೇಕು, ಮಾರುಕಟ್ಟೆಯ ಮುಂದಿನ ಮೈದಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ತಿಂಡಿತಿನಿಸುಗಳ ಗೂಡಂಗಡಿಗಳನ್ನು ಸ್ಥಳಾಂತರಿಸಬೇಕು, ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಬೇಕು, ಹೊರಗಿನವರು ಮಾರುಕಟ್ಟೆ ಪ್ರದೇಶದೊಳಗೆ ಕಸ ಎಸೆಯದಂತೆ ನಿರ್ಬಂಧಿಸಬೇಕು, ತಾತ್ಕಾಲಿಕ ಮಾರುಕಟ್ಟೆಗೆ ರಾತ್ರಿ ಹೊತ್ತು ವಾಚ್‌ಮೆನ್ ನಿಯುಕ್ತಿಗೊಳಿಸಬೇಕು, ಒಂದಕ್ಕಿಂತ ಹೆಚ್ಚು ಅಂಗಡಿಗಳನ್ನು ಹೊಂದಿರುವವರಿಗೆ ಸುಗಮ ವ್ಯಾಪಾರ ನಡೆಸುವ ಸಲುವಾಗಿ ಅವರದೇ ಖರ್ಚಿನಲ್ಲಿ ಅಂಗಡಿಗಳ ನಡುವಿನ ಗೋಡೆಯನ್ನು ಕೆಡವಲು ಅನುಮತಿ ನೀಡಬೇಕು, ತಾತ್ಕಾಲಿಕ ಮಾರುಕಟ್ಟೆಯಲ್ಲಿ ಪ್ರತಿಯೊಬ್ಬ ವ್ಯಾಪಾರಿಗೆ 60 ಚ.ಅಡಿಯ ಅಂಗಡಿ ನೀಡಲಾಗಿದೆ. ಆದರೆ, ಇದಕ್ಕೆ ಮಾಸಿಕ 2,500 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಈ ಬಾಡಿಗೆಯನ್ನು 1,000 ರೂ.ಗೆ ಇಳಿಸಬೇಕು ಎಂದು ವರ್ತಕರ ಸಂಘ ಮನವಿಯಲ್ಲಿ ಒತ್ತಾಯಿಸಿದೆ.

ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ ಮತ್ತು ಪ್ರವೀಣ್‌ಚಂದ್ರ ಆಳ್ವ ನೇತೃತ್ವದ ನಿಯೋಗದಲ್ಲಿ ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್, ಗೌರವಾಧ್ಯಕ್ಷ ದೇವದಾಸ್, ಪ್ರಧಾನ ಕಾರ್ಯದರ್ಶಿ ರೋಶನ್ ಪತ್ರಾವೋ, ಕೋಶಾಧಿಕಾರಿ ವಸಂತ ಟೈಲರ್, ಸತ್ತಾರ್, ಸಫ್ವಾನ್, ಲೋಕೇಶ್, ಚಂದ್ರ, ಪ್ರವೀಣ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News