ಕೋವಿಡ್-19 ವೈರಸ್ ಭೀತಿ: ಕೊಲ್ಲೂರು ದೇವಸ್ಥಾನದಲ್ಲಿ ಸರಳ ರಥೋತ್ಸವ

Update: 2020-03-17 14:21 GMT

ಕೊಲ್ಲೂರು, ಮಾ.17: ನೋವೆಲ್ ಕೊರೋನ ವೈರಸ್ (ಕೋವಿಡ್ 19) ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಇಂದು ಅತ್ಯಂತ ಸರಳ ರೀತಿಯಲ್ಲಿ ರಥೋತ್ಸವವನ್ನು ಆಚರಿಸಲಾಯಿತು. ಎಂದಿನ ಸದ್ದುಗದ್ದಲಗಳಿಲ್ಲದೇ ಕನಿಷ್ಠ ಜನರ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಸರಳವಾಗಿ ನಡೆದವು.

ಆದರೆ ಇಂದು ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿ ಅರ್ಚಕರು ಪೂಜೆ ಸಲ್ಲಿಸಿ, ದೇವಸ್ಥಾನದ ಬಾಗಿಲಿನವರೆಗೆ ಅಂದರೆ ಸುಮಾರು 10 ಮೀ.ನಷ್ಟು ರಥ ಎಳೆದು ಸಂಪ್ರದಾಯದ ಆಚರಣೆ ನಡೆಯಿತು. ದೇವಸ್ಥಾನದ ಸುತ್ತ ಬಲಿ ಉತ್ಸವ ನಡೆಸಿ ಸಂಪ್ರದಾಯವನ್ನು ಪಾಲಿಸಲಾ ಯಿತು. ಇದರಲ್ಲಿ ದೇವಸ್ಥಾನದ ಇಓ, ಆಡಳಿತ ಮಂಡಳಿ ಸದಸ್ಯರು, ಅರ್ಚಕರು ಹಾಗೂ ದೇವಸ್ಥಾನದ ಸಿಬ್ಬಂದಿಗಳು ಮಾತ್ರ ಪಾಲ್ಗೊಂಡರು. ಇದೇ ಮೊದಲ ಬಾರಿ ದೇವ್ಥಾನದಲ್ಲಿ ರಥೋತ್ಸವ ನಡೆಯಲಿಲ್ಲ.

ಕೇವಲ ರಥಾರೋಹಣ ನಡೆಸಿ, ಯಾವುದೇ ಉತ್ಸವ ನಡೆಸದಂತೆ, ಧಾರ್ಮಿಕ ವಿಧಿವಿದಾನಗಳಿಗೆ ಮಾತ್ರ ಅವಕಾಶ ನೀಡುವಂತೆ, ಕೇವಲ ಆಡಳಿತ ಮಂಡಳಿ, ಅರ್ಚಕರು ಹಾಗೂ ದೇವಳದ ಸಿಬ್ಬಂದಿಗಳಿಗೆ ಮಾತ್ರ ಭಾಗಿಯಾಗಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು ಎಂದು ದೇವಸ್ಥಾನದ ಆಡಳಿತಾಧಿಕಾರಿ ಅರವಿಂದ ಸುತಗುಂಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News