ಶಂಕಿತ ಕೊರೋನ: ಮಹಿಳೆ ಸೇರಿ ಐವರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು
ಉಡುಪಿ, ಮಾ.17: ಶಂಕಿತ ನೋವೆಲ್ ಕೊರೋನ ವೈರಸ್‌ನ ಮಹಾಮಾರಿ ದೇಶಾದ್ಯಂತ ಶರವೇಗದಲ್ಲಿ ಹಬ್ಬುತ್ತಿರುವ ನಡುವೆಯೇ ಮಂಗಳವಾರ ಒಂದೇ ದಿನ ಓರ್ವ ಮಹಿಳೆಯೂ ಸೇರಿದಂತೆ ಜಿಲ್ಲೆಯ ಐವರು ಶಂಕಿತ ವೈರಸ್ ಸೋಂಕಿನ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಕೊರೋನ ವೈರಸ್ ಪೀಡಿತರಿಗಾಗಿ ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿರುವ ಪ್ರತ್ಯೇಕಿತ ವಾರ್ಡಿಗೆ ಈ ಐವರನ್ನೂ ಸೇರಿಸಲಾಗಿದ್ದು, ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಶಂಕಿತ ಸೋಂಕಿಗಾಗಿ ದಾಖಲಾಗಿರುವ ಐವರಲ್ಲಿ ಮೂವರು ದುಬೈನಿಂದ ಮರಳಿದ್ದು ಜ್ವರ ಹಾಗೂ ಕೆಮ್ಮುವಿನಿಂದ ಬಳಲುತಿದ್ದಾರೆ. ಮತ್ತೊಬ್ಬರು ಕತಾರ್‌ನಿಂದ ಮರಳಿದ್ದು ತಲೆನೋವು ಮತ್ತು ಜ್ವರದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುವೈತ್ ನಿಂದ ಮರಳಿರುವ ಮಹಿಳೆ ಕೆಮ್ಮು ಹಾಗೂ ಗಂಟಲು ನೋವಿಗಾಗಿ ಕೊರೋನ ವೈರಸ್ ಪರೀಕ್ಷೆಗೆ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಐವರು ಶಂಕಿತರ ಗಂಟಲು ದ್ರವಗಳ ಮಾದರಿಗಳನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವುಗಳ ವರದಿ ನಾಳೆ ಬರುವ ನಿರೀಕ್ಷೆ ಇದೆ ಎಂದವರು ಅವರು ವಿವರಿಸಿದರು. ಇಂದು ಪರೀಕ್ಷೆಗಾಗಿ ಸೇರ್ಪಡೆಗೊಂಡ ಐವರಲ್ಲಿ ಮೂವರು ಕುಂದಾಪುರ ತಾಲೂಕು ಹಾಗೂ ಇಬ್ಬರು ಕಾಪು ತಾಲೂಕಿನವರೆಂದು ತಿಳಿದುಬಂದಿದೆ.
ವರದಿ ಬಂದಿಲ್ಲ: ಈ ನಡುವೆ ಸೋಮವಾರ ಕೊರೋನ ವೈರಸ್‌ನ ಪ್ರಾಥಮಿಕ ಲಕ್ಷಣ ಗಳೊಂದಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಐಸೋಲೇಟೆಡ್ ವಾರ್ಡಿಗೆ ದಾಖಲಾಗದ ಗರ್ಭಿಣಿ ಮಹಿಳೆಯ ಗಂಟಲಿನ ದ್ರವದ ಮಾದರಿ ಪರೀಕ್ಷಾ ವರದಿ ಇನ್ನೂ ಬಂದಿಲ್ಲ ಎಂದು ಡಾ.ಸೂಡ ತಿಳಿಸಿದರು.
16ರಲ್ಲಿ 10 ನೆಗೆಟೀವ್: ಜಿಲ್ಲೆಯಲ್ಲಿ ಈವರೆಗೆ ಒಟ್ಟು 16 ಮಂದಿ ಶಂಕಿತ ವೈರಸ್‌ಗಾಗಿ ಪರೀಕ್ಷೆಗೊಳಪಟ್ಟಿದ್ದು, ಇವರಲ್ಲಿ 10 ಮಂದಿಯ ವರದಿ ನೆಗೆಟೀವ್ ಆಗಿ ಬಂದಿದೆ. ಇಂದಿನ ಐವರು ಸೇರಿದಂತೆ ಆರು ಮಂದಿಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.
ಈವರೆಗೆ ಜಿಲ್ಲೆಗೆ ವಿದೇಶಗಳಿಂದ ಆಗಮಿಸಿದ 152 ಮಂದಿಯನ್ನು ಮನೆಯಲ್ಲೇ ನಿರ್ಬಂಧದಲ್ಲಿರಿಸಲಾಗಿದ್ದು, ಇವರಲ್ಲಿ 18 ಮಂದಿ ನಿರ್ಬಂಧಾವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಡಿಎಚ್‌ಒ ತಿಳಿಸಿದ್ದಾರೆ.