ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಬ್ಲಾಕ್ ಅಧ್ಯಕ್ಷರ ಸಭೆ
ಉಡುಪಿ, ಮಾ.17: ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ ಪ್ರತೀ ಗ್ರಾಮ ಗಳಲ್ಲಿ ಸಂಪರ್ಕ ರಸ್ತೆ, ಕಾಂಕ್ರೀಟ್ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಹಲವಾರು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿವೆ. ಜನರಿಗೆ ಇದನ್ನು ಮನವರಿಕೆ ಮಾಡಲು ನಮ್ಮ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಬೇಕೆಂದು ವಿವಿಧ ಬ್ಲಾಕ್ ಅಧ್ಯಕ್ಷರ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸಲಹೆ ನೀಡಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ವಿವಿಧ ಬ್ಲಾಕ್ ಅಧ್ಯಕ್ಷರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶೀಘ್ರದಲ್ಲೇ ಪಂಚಾಯತ್ ಚುನಾವಣೆಗಳು ಬರುವುದರಿಂದ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಪಕ್ಷದ ಸಂಘಟನೆಗೆ ಒತ್ತು ನೀಡಿ ತ್ವರಿತವಾಗಿ ಬೂತ್ ಸಮಿತಿ ಗಳನ್ನು ರಚಿಸಬೇಕಾಗಿದೆ. ವಿವಿಧ ಸಮಿತಿಗಳನ್ನು ರಚಿಸಿ ಸಂಘಟನೆಗೆ ಚಾಲನೆ ನೀಡಿದರೆ ಮತದಾರರನ್ನು ತಲುಪಲು ಸಹಕಾರಿಯಾಗುವುದು. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುವುದಲ್ಲದೆ ಕೇಂದ್ರ ಸರಕಾರ ಜನರನ್ನು ಭಯದ ವಾತಾವರಣಕ್ಕೆ ತಳ್ಳಿದ ಎನ್‌ಆರ್‌ಸಿ ಹಾಗೂ ಸಿಎಎ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯವು ಕಾರ್ಯಕರ್ತರಿಂದ ನಡೆಯಬೇಕಿದೆ ಎಂದರು.
ಬೂತ್ ಮಟ್ಟದಲ್ಲೇ ಮುಖಂಡತ್ವವನ್ನು ಬೆಳೆಸುವಲ್ಲಿ ಪಕ್ಷವು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು. ಹಾಗೆಯೇ ನಿರಂತರ ಜನ ಸಂಪರ್ಕವಿರುವ ವ್ಯಕ್ತಿಗಳನ್ನು ಗುರುತಿಸಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಿದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಗತ ವೈಭವಕ್ಕೆ ಮರಳಲು ಸಾಧ್ಯ. ಪಕ್ಷದ ಮುಖಂಡರು ಸಂಘಟನೆಗಾಗಿ ತಮ್ಮ ಸಮಯವನ್ನು ಮೀಸಲಾಗಿಡುವುರೊಂದಿಗೆ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಕಾರ್ಯಕರ್ತರನ್ನು ಮತ್ತೆ ಪಕ್ಷದಲ್ಲಿ ಸಕ್ರಿಯಗೊಳಿಸುವಲ್ಲಿ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾಧ್ಯಕ್ಷರು ಹೇಳಿದರು.
ಡಿ.ಕೆ.ಶಿವಕುಮಾರ್ ಆಯ್ಕೆಗೆ ಹರ್ಷ: ಡಿ.ಕೆ.ಶಿವಕುಮಾರ್ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಪಕ್ಷದ ವರಿಷ್ಠರ ತೀರ್ಮಾನ ಸ್ವಾಗತಾರ್ಹ. ಈಗಾಗಲೇ ಕರ್ನಾಟಕದ ಜನತೆಯಿಂದ ಗುರುತಿಸಲ್ಪಟ್ಟು ಜನರ ವಿಶ್ವಾಸ ಗಳಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಅಭಿಮಾನಿ ಬಳಗವನ್ನು ಹೊಂದಿದ ಡಿಕೆಶಿ ಅವರು ಪಕ್ಷವನ್ನು ಸಂಘಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಡಿಕೆಶಿಯವರಿಗೆ ಅವರದೇ ಆದ ರಾಜಕೀಯ ವರ್ಚಸ್ಸಿದೆ, ವಾಕ್ಚಾತುರ್ಯವಿದೆ. ಸಮುದಾಯದ ಬೆಂಬಲ ಕೂಡಾ ಅವರ ಬೆನ್ನಿಗಿದೆ ಹೀಗಾಗಿ ಕೆಪಿಸಿಸಿ ಅದ್ಯಕ್ಷ ಹುದ್ದೆಗೆ ಸರಿಯಾದ ಆಯ್ಕೆ ನಡೆದಿದೆ ಎಂದು ಅಶೋಕ್ ಕುಮಾರ್ ತಿಳಿಸಿದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಭಾಸ್ಕರ್‌ರಾವ್ ಕಿದಿಯೂರು, ಕೀರ್ತಿ ಶೆಟ್ಟಿ, ಅಣ್ಣಯ್ಯ ಶೆರಿಗಾರ್, ವಿವಿಧ ಬ್ಲಾಕ್ ಅಧ್ಯಕ್ಷರಾದ ಶಂಕರ್ ಕುಂದರ್, ಮದನ್ ಕುಮಾರ್, ಪ್ರದೀಪ್ ಕುಮಾರ್ ಶೆಟ್ಟಿ, ನವೀನ್‌ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಮಂಜುನಾಥ ಪೂಜಾರಿ, ಶೇಖರ್ ಮಡಿವಾಳ ಉಪಸ್ಥಿತರಿದ್ದರು.