ಕೊರೋನವೈರಸ್ ‘ಚೀನಾದ ವೈರಸ್’ ಎಂದು ಬಣ್ಣಿಸಿದ ಡೊನಾಲ್ಡ್ ಟ್ರಂಪ್

Update: 2020-03-17 14:42 GMT

ವಾಶಿಂಗ್ಟನ್, ಮಾ. 17: ಈಗ ಜಗತ್ತನ್ನೇ ಸ್ತಬ್ಧಗೊಳಿಸಿರುವ ನೂತನ-ಕೊರೋನವೈರಸ್ ಕಾಯಿಲೆಯು ‘ಚೀನಾದ ವೈರಸ್’ ಆಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬಣ್ಣಿಸಿದ್ದಾರೆ.

‘‘ಚೀನಾದ ವೈರಸ್‌ನಿಂದ ಬಾಧೆಗೊಳಗಾಗಿರುವ ವಾಯುಯಾನ ಮುಂತಾದ ಉದ್ದಿಮೆಗಳಿಗೆ ಅಮೆರಿಕವು ಬೆಂಬಲ ನೀಡುವುದು’’ ಎಂದು ಟ್ರಂಪ್ ಸೋಮವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

ಈ ಮೊದಲು, ಟ್ರಂಪ್‌ರ ನಿಕಟವರ್ತಿಗಳು ಕೊರೋನವೈರಸನ್ನು ಚೀನಾ ವೈರಸ್ ಎಂಬುದಾಗಿ ಕರೆದಿದ್ದರು. ಆದರೆ, ಸ್ವತಃ ಅಮೆರಿಕ ಅಧ್ಯಕ್ಷರೇ ಹೀಗೆ ಹೇಳಿರುವುದು ಇದೇ ಮೊದಲ ಬಾರಿಯಾಗಿದೆ.

ಎಲ್ಲ ವಯೋವೃದ್ಧರು ಮನೆಯೊಳಗೆ ಉಳಿಯಬೇಕು ಹಾಗೂ ಪ್ರತಿಯೊಬ್ಬರು ಗುಂಪುಗಳಿಂದ ದೂರವುಳಿಯಬೇಕು ಹಾಗೂ ರೆಸ್ಟೋರೆಂಟ್‌ಗಳಲ್ಲಿ ತಿನ್ನುವುದನ್ನು ನಿಲ್ಲಿಸಬೇಕು ಎಂದು ಟ್ರಂಪ್ ಅಮೆರಿಕನ್ನರಿಗೆ ಸೂಚಿಸಿದ್ದಾರೆ.

ಕಳಂಕ ಹಚ್ಚುವ ಪ್ರಯತ್ನ: ಚೀನಾ ಆಕ್ರೋಶ

ನೋವೆಲ್-ಕೊರೋನವೈರಸ್ ‘ಚೀನಾದ ವೈರಸ್’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದಕ್ಕೆ ಚೀನಾ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದೆ.

‘‘ವೈರಸ್‌ಗೆ ಚೀನಾದೊಂದಿಗೆ ನಂಟು ಕಲ್ಪಿಸುವುದು ಒಂದು ವಿಧದಲ್ಲಿ ಕಳಂಕ ಹಚ್ಚುವುದಾಗಿದೆ’’ ಎಂದು ಹೇಳಿದ ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್, ‘‘ಇದರಿಂದ ನಾವು ಆಕ್ರೋಶಗೊಂಡಿದ್ದೇವೆ ಹಾಗೂ ಅದನ್ನು ನಾವು ದೃಢವಾಗಿ ವಿರೋಧಿಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News