×
Ad

ಕೊರೋನ: ದ.ಕ. ಜಿಲ್ಲೆಯಲ್ಲಿ 456 ಮಂದಿ ತಪಾಸಣೆ

Update: 2020-03-17 20:53 IST

ಮಂಗಳೂರು, ಮಾ.17: ಕೊರೋನ ಸೋಂಕು ತಡೆಗಟ್ಟಲು ದ.ಕ. ಜಿಲ್ಲಾಡಳಿತ ಪಣತೊಟ್ಟಿದ್ದು, ಹಗಲಿರುಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎನ್‌ಎಂಪಿಟಿ ಸಹಿತ ಜಿಲ್ಲೆಯ ವಿವಿಧೆಡೆ ಸುರಕ್ಷತಾ ದೃಷ್ಟಿಯಿಂದ 456 ಮಂದಿಯನ್ನು ಆರೋಗ್ಯ ಕಾರ್ಯಕರ್ತರು ಮಂಗಳವಾರ ತಪಾಸಣೆ ನಡೆಸಿದ್ದಾರೆ.

ಕೊರೋನ ಶಂಕೆಯಲ್ಲಿ 241 ಮಂದಿಯನ್ನು ಅವರ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಿ, ನಿಗಾ ವಹಿಸಲಾಗಿದೆ. ಪ್ರತ್ಯೇಕಿಸಲಾಗಿ ಇರಿಸಿದ್ದ ಎಂಟು ಮಂದಿಯ ಅವಧಿಯು ಪೂರ್ಣಗೊಂಡಿದೆ. ಏತನ್ಮಧ್ಯೆ, 14 ಮಂದಿಯ ರಕ್ತ ಮತ್ತು ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡ ಲಾಗಿದೆ. ಸೋಮವಾರ 10 ಸ್ಯಾಂಪಲ್‌ಗಳ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ವರದಿಗಳಾಗಿವೆ. ಹೊಸದಾಗಿ ಏಳು ಮಂದಿಯ ಮೇಲೆ ಜಿಲ್ಲಾ ಆರೋಗ್ಯ ಇಲಾಖೆ ವಿಶೇಷ ನಿಗಾ ಇರಿಸಿದೆ.

ಕೊರೋನ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲ ಧಾರ್ಮಿಕ ಧರ್ಮಗುರುಗಳಿಗೂ ಸಂಪರ್ಕಿಸಿ ಜಾಗೃತಿ ಮೂಡಿಸಲು ಮನವಿ ಮಾಡಲಾಗಿದೆ. ಅಲ್ಲದೆ, ಯಕ್ಷಗಾನ ಕಾರ್ಯಕ್ರಮಗಳನ್ನು ಮುಂಡೂಡಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚನೆ ನೀಡಿದ್ದಾರೆ.

ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಬಗ್ಗೆ ತರಬೇತಿ ನೀಡಿ, ಮನೆ ಮನೆಗಳಿಗೆ ಭೇಟಿ ನೀಡಿ ವಿದೇಶದಿಂದ ಆಗಮಿಸಿರು ವವರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಅವರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಅಧಿಕಾರಿಗಳ ತಂಡವು ಮಾ.16ರವರೆಗೆ 2,047 ಮನೆಗಳಿಗೆ ಭೇಟಿ ನೀಡಿದೆ. ಸೂಕ್ತ ಮಾಹಿತಿ ನೀಡಿ, ಅವರ ಆರೋಗ್ಯ ವಿಚಾರಣೆ ನಡೆಸುತ್ತಿದೆ ಎಂದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾ.14ರಂದು ಆಗಮಿಸಿದ ಕಾಸರಗೋಡಿನ ವ್ಯಕ್ತಿಯೊಬ್ಬರನ್ನು ತಪಾಸಣೆ ಮಾಡುವಾಗ ಯಾವುದೇ ರೋಗದ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೆ ಈ ವ್ಯಕ್ತಿಯು ವಿಮಾನ ನಿಲ್ದಾಣದಿಂದ ಕಾಸರಗೋಡಿನ ಮನಗೆ ತೆರಳಿದ ಎರಡು ದಿನಗಳ ನಂತರ ಅವರಲ್ಲಿ ರೋಗದ ಲಕ್ಷಣಗಳು ಕಂಡುಬಂದಿವೆ. ಈ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಮಾ.16ರಂದು ಭಾರತ ಸರಕಾರವು ನೀಡಿರುವ ನಿರ್ದೇಶನದಂತೆ, ಯು.ಎ.ಇ., ಕತಾರ್, ಓಮನ್, ಕುವೈಟ್ ದೇಶಗಳಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಕಡ್ಡಾಯವಾಗಿ 14 ದಿನಗಳವರೆಗೆ ಮನೆಯಲ್ಲಿ ಪ್ರತ್ಯೇಕವಾಗಿಡಬೇಕು. ಅಗತ್ಯವಿರುವ ಪ್ರಕರಣಗಳನ್ನು 14 ದಿನಗಳವರೆಗೆ ವೈದ್ಯಕೀಯ ನಿಗಾದಲ್ಲಿ ಇರಿಸಲಾಗುವುದು. ಈ ಕುರಿತು ಮಂಗಳೂರಿಗೆ ಆಗಮಿಸುವ ಪ್ರಯಾಣಿಕರು ಮತ್ತು ಅವರ ಕುಟುಂಬಸ್ಥರು ಸಹಕರಿಸಲು ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News