ಕೊರೋನವೈರಸ್ ಭೀತಿ:ಎರಡು ದಿನಗಳಲ್ಲಿ ಕರಗಿತು ಹೂಡಿಕೆದಾರರ 9.74 ಲ.ಕೋ.ರೂ.ಸಂಪತ್ತು

Update: 2020-03-17 16:49 GMT

ಹೊಸದಿಲ್ಲಿ,ಮಾ.17: ದುರ್ಬಲ ಜಾಗತಿಕ ಪ್ರವೃತ್ತಿ ಮತ್ತು ಒಟ್ಟಾರೆ ಆರ್ಥಿಕತೆಗೆ ಕೊರೋನವೈರಸ್ ಭೀತಿಯಿಂದಾಗಿ ಎರಡು ದಿನ ಸತತವಾಗಿ ಶೇರು ಮಾರುಕಟ್ಟೆಯ ಕುಸಿತವು ಹೂಡಿಕೆದಾರರ 9.74 ಲ.ಕೋ.ರೂ.ಗಳ ಸಂಪತ್ತನ್ನು ಕರಗಿಸಿದೆ.

ಸೋಮವಾರ ಮತ್ತು ಮಂಗಳವಾರ ಭಾರತೀಯ ಹೂಡಿಕೆದಾರರು 9,74,176.71 ಕೋ.ರೂ.ಗಳ ನಷ್ಟವನ್ನು ಅನುಭವಿಸಿದ್ದಾರೆ.

ಮಂಗಳವಾರ ಬಾಂಬೆ ಶೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ 810.98 ಅಂಶಗಳನ್ನು ಕಳೆದುಕೊಂಡು 30,579.09ರಲ್ಲಿ ಮುಕ್ತಾಯಗೊಂಡಿದ್ದರೆ,ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (ಎನ್‌ಎಸ್‌ಇ)ದ ಸೂಚ್ಯಂಕ ನಿಫ್ಟಿ 230.35 ಅಂಶಗಳ ನಷ್ಟದೊಂದಿಗೆ 8967.05ರಲ್ಲಿ ವಹಿವಾಟು ಮುಗಿಸಿದೆ. ಸೋಮವಾರ ದಿನದ ವಹಿವಾಟು ಮುಕ್ತಾಯಗೊಂಡಾಗ ಸೆನ್ಸೆಕ್ಸ್ 2713 ಮತ್ತು ನಿಫ್ಟಿ 756 ಅಂಶಗಳ ನಷ್ಟವನ್ನು ದಾಖಲಿಸಿದ್ದವು.

 ಕೊರೋನವೈರಸ್ ಭೀತಿ ಆರ್ಥಿಕತೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು,ವಿಶ್ವಾದ್ಯಂತ ಶೇರು ಮಾರುಕಟ್ಟೆಗಳು ಕುಸಿತದ ಮೇಲೆ ಕುಸಿತವನ್ನು ದಾಖಲಿಸುತ್ತಲೇ ಇವೆ. ಸರಕಾರಗಳು ಕೈಗೊಂಡಿರುವ ಉತ್ತೇಜಕ ಕ್ರಮಗಳು ಹೂಡಿಕೆದಾರರಲ್ಲಿಯ ಭೀತಿಯನ್ನು ನಿವಾರಿಸುವಲ್ಲಿ ವಿಫಲಗೊಂಡಿವೆ.

 ದೇಶಿಯ ಶೇರು ಮಾರುಕಟ್ಟೆಗಳು ವಿದೇಶಿ ಮಾರುಕಟ್ಟೆಗಳಲ್ಲಿನ ಪ್ರವೃತ್ತಿಯನ್ನು ಅನುಸರಿಸುವುದನ್ನು ಮುಂದುವರಿಸಲಿವೆ. ಸದ್ಯೋಭವಿಷ್ಯದಲ್ಲಿ ಮಾರುಕಟ್ಟೆಗಳು ಇನ್ನಷ್ಟು ಪ್ರಪಾತಕ್ಕಿಳಿಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಶೇರು ಮಾರುಕಟ್ಟೆ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News