ನಿಯಮ ಉಲ್ಲಂಘಿಸಿ ಮಕ್ಕಳಿಗೆ ತರಗತಿ ನಡೆಸಿದರೆ ಜಿಲ್ಲಾಧಿಕಾರಿಗಳಿಗೆ ದೂರು: ಬಿಇಒ ಲೋಕೇಶ್
ಪುತ್ತೂರು: ತಾಲೂಕಿನ ಕೆಲವು ಪ್ರೌಢಶಾಲೆಗಳಲ್ಲಿ 10ನೇ ತರಗತಿ ಮಕ್ಕಳಿಗೆ ತರಗತಿ ನಡೆಸಲಾಗುತ್ತಿರುವ ಮಾಹಿತಿ ಬಂದಿದೆ. ಇದು ಸರ್ಕಾರದ ಹಾಗೂ ಇಲಾಖೆಯ ನಿಯಮ ಉಲ್ಲಂಘನೆಯಾಗಿದ್ದು, ಇಂತಹ ಶಾಲೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣಾ ಕಾಯ್ದೆಯಡಿ ಕಾನೂನು ಪ್ರಕಾರ ಶಿಸ್ತುಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ತಿಳಿಸಿದರು.
ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೆಲವೊಂದು ಪ್ರೌಢಶಾಲೆಗಳಲ್ಲಿ ಅನಧಿಕೃತವಾಗಿ 10ನೇ ತರಗತಿ ಮಕ್ಕಳಿಗೆ ತರಗತಿ ನಡೆಸಲಾಗುತ್ತಿದೆ. ಶಾಲಾ ಸಮವಸ್ತ್ರ ಬದಲಿಗೆ ಬೇರೆ ಉಡುಪುಗಳನ್ನು ಧರಿಸಿ ಮಕ್ಕಳು ಪ್ರೌಢಶಾಲೆಗಳಿಗೆ ಹಾಜರಾಗುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಪುತ್ತೂರು ನಗರದ ಕೆಲವು ಪ್ರೌಢಶಾಲೆಗಳು ಹಾಗೂ ಗ್ರಾಮೀಣಭಾಗದ ಕೆಲವು ಶಾಲೆಗಳಲ್ಲೂ ಈ ರೀತಿ ತರಗತಿ ನಡೆಸಲಾಗುವುದು ಕಂಡುಬಂದಿದೆ. ಈಗಾಗಲೇ ಎಲ್ಲಾ ಪ್ರೌಢಶಾಲೆಗಳಿಗೆ ನೋಟೀಸು ನೀಡಲಾಗಿದೆ. ನಿಯಮ ಮೀರಿ ವರ್ತಿಸುವ ಪ್ರೌಢಶಾಲೆಗಳಿಗೆ ಮತ್ತೆ ನೋಟೀಸು ನೀಡಲಾಗುವುದು ಹಾಗೂ ಇಂತಹ ಶಾಲೆಗಳ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.
ಸರ್ಕಾರ ಮಾರ್ಚ್ 31ರ ತನಕ 7,8,9ನೇ ತರಗತಿ ತನಕ ಕಡ್ಡಾಯ ರಜೆ ನೀಡಿದೆ. ಎಸ್‍ಎಸ್‍ಎಲ್‍ಸಿ ಮಕ್ಕಳಿಗೂ ಪರೀಕ್ಷೆಗೆ ಮಾತ್ರ ಹಾಜರಾಗಲು ತಿಳಿಸಿದೆ. ಈ ನಡುವೆ ಯಾವುದೇ ತರಗತಿ ನಡೆಸುವ ಹಾಗಿಲ್ಲ. ಹಾಗಿದ್ದರೂ ಕೆಲವು ಶಾಲೆಗಳಲ್ಲಿ ಶಿಕ್ಷಕರು ನಿಯಮ ಮೀರಿ ತರಗತಿ ನಡೆಸುವ ಬಗ್ಗೆ ಶಿಕ್ಷಕರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.