×
Ad

ಇರಾನ್‌ಗೆ ತೆರಳಿದ್ದ ನಿಯೋಗದಲ್ಲಿಯ 250ಕ್ಕೂ ಅಧಿಕ ಭಾರತೀಯರಿಗೆ ಕೊರೋನವೈರಸ್ ಸೋಂಕು:ವೈದ್ಯರು

Update: 2020-03-17 22:35 IST

ಹೊಸದಿಲ್ಲಿ,ಮಾ.17: ಭಾರತದಿಂದ ಇರಾನಿಗೆ ತೆರಳಿರುವ ವೈದ್ಯರು ಸಿದ್ಧಪಡಿಸಿದ್ದಾರೆ ಎನ್ನಲಾಗಿರುವ ಪಟ್ಟಿಯಂತೆ ಆ ರಾಷ್ಟ್ರದಲ್ಲಿ 250ಕ್ಕೂ ಅಧಿಕ ಭಾರತೀಯರು ಕೊರೋನವೈರಸ್ ಸೋಂಕಿಗೊಳಗಾಗಿದ್ದಾರೆ.

ಇವರೆಲ್ಲ ಕಳೆದ ಫೆಬ್ರುವರಿಯಿಂದಲೂ ಇರಾನಿನಲ್ಲಿ ಅತಂತ್ರವಾಗಿರುವ, ಲಡಾಖ್‌ನ ಕಾರ್ಗಿಲ್‌ನಿಂದ ತೆರಳಿದ್ದ ನಿಯೋಗವೊಂದರ ಸದಸ್ಯರಾಗಿದ್ದಾರೆ. ಕೊರೋನವೈರಸ್ ಪಿಡುಗು ಅತ್ಯಂತ ತೀವ್ರವಾಗಿರುವ ಪ್ರದೇಶಗಳಲ್ಲೊಂದಾಗಿರುವ ಕೋಮ್‌ನ ವಿವಿಧ ಹೋಟೆಲ್‌ಗಳಲ್ಲಿ ಮತ್ತು ಇತರ ವಸತಿ ತಾಣಗಳಲ್ಲಿ ನಿಯೋಗದ ಸದಸ್ಯರು ಸಿಕ್ಕಿಹಾಕಿಕೊಂಡಿದ್ದಾರೆ.

ಇರಾನಿನಲ್ಲಿರುವ ಭಾರತೀಯರ ತಪಾಸಣೆಗಾಗಿ ಕೇಂದ್ರವು ಪುಣೆಯ ವೈದ್ಯರ ತಂಡವೊಂದನ್ನು ಅಲ್ಲಿಗೆ ರವಾನಿಸಿತ್ತು.

ಇರಾನಿನಲ್ಲಿ ಸೋಂಕುಪೀಡಿತ ಭಾರತೀಯರಲ್ಲಿ ತನ್ನ ಬಂಧುಗಳು ಸೇರಿದ್ದಾರೆ ಎಂದು ತಿಳಿಸಿದ ಕಾರ್ಗಿಲ್‌ನ ವಕೀಲ ಹಾಜಿ ಮುಸ್ತಫಾ ಅವರು,ಅಧಿಕಾರಿಗಳ ನಿರ್ಲಕ್ಷವು ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಿದೆ ಎಂದು ಆರೋಪಿಸಿದರು.

ಇರಾನಿನಲ್ಲಿರುವ ಭಾರತೀಯರ ವೈದ್ಯಕೀಯ ತಪಾಸಣೆ ವರದಿಗಳನ್ನು ಕಂತುಗಳಲ್ಲಿ ಬಿಡುಗಡೆ ಮಾಡಲಾಗಿತ್ತು ಮತ್ತು ಸೋಂಕು ದೃಢಪಟ್ಟವರನ್ನು ಪ್ರತ್ಯೇಕವಾಗಿರಿಸಲು ಸಾಕಷ್ಟು ಪ್ರಯತ್ನಗಳು ನಡೆದಿರಲಿಲ್ಲ. ಇದು ಸೋಂಕು ನಿಯೋಗದಲ್ಲಿದ್ದ ಹೆಚ್ಚಿನ ಜನರಿಗೆ ಹರಡಲು ಕಾರಣವಾಗಿತ್ತು ಎಂದರು. ಭಾರತೀಯರನ್ನು ಇರಾನಿನಿಂದ ಮರಳಿ ಕರೆತರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿಗಾಗಿ ಅವರ ಕುಟುಂಬಗಳು ಕಾಯುತ್ತಿವೆ ಎಂದರು.

ಕಳೆದೊಂದು ವಾರದಲ್ಲಿ ಇರಾನಿನಿಂದ 200ಕ್ಕೂ ಅಧಿಕ ಭಾರತೀಯರನ್ನು ತಂಡಗಳಲ್ಲಿ ದೇಶಕ್ಕೆ ವಾಪಸ್ ಕರೆತರಲಾಗಿದೆ. ಈ ಪೈಕಿ ಹೆಚ್ಚಿನವರು ಇರಾನಿನ ವಿವಿಧ ವಿವಿಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ಜಮ್ಮು-ಕಾಶ್ಮೀರದ ವಿದ್ಯಾರ್ಥಿ ಗಳಾಗಿದ್ದಾರೆ.

ಇರಾನಿನಲ್ಲಿ 700ಕ್ಕೂ ಅಧಿಕ ಜನರು ಕೊರೋನವೈರಸ್‌ಗೆ ಬಲಿಯಾಗಿದ್ದು, ಸುಮಾರು 14,000 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

 ಇರಾನಿನಿಂದ ಒಟ್ಟು 234 ಭಾರತೀಯರನ್ನು ತೆರವುಗೊಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದರು.

ಇರಾನಿನಲ್ಲಿರುವ 250ಕ್ಕೂ ಅಧಿಕ ಸೋಂಕುಪೀಡಿತರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ದಮ್ಮು ರವಿ ಅವರು,ಇರಾನಿನಲ್ಲಿರುವ ಎಲ್ಲ ಭಾರತೀಯರು ಸುರಕ್ಷಿತವಾಗಿದ್ದಾರೆ ಮತ್ತು ಅವರ ಬಗ್ಗೆ ಕಾಳಜಿಯನ್ನು ವಹಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಮಾರು 250 ಭಾರತೀಯರ ಪಟ್ಟಿಯನ್ನು ತಾನು ದೃಢಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News