ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆತ : 2 ಸಾವಿರ ರೂ. ದಂಡ

Update: 2020-03-17 17:07 GMT

ಪುತ್ತೂರು : ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಪರಿಸರ ಸ್ವಚ್ಚತೆಗೆ ದಕ್ಕೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನ ಕಬಕ ಗ್ರಾಮ ಪಂಚಾಯತ್ ಪ್ರಥಮ ಬಾರಿಗೆ ವ್ಯಕ್ತಿಯೊಬ್ಬರಿಗೆ 2 ಸಾವಿರ ರೂ.  ದಂಡ ವಿಧಿಸಿದೆ.

ಮಂಗಳೂರು ಸುರತ್ಕಲ್ ನಿವಾಸಿ ಯುನಾಸ್ ಎಂಬವರು ಕಸ ಎಸೆದು ದಂಡ ಪಾವತಿಸಿದ ವ್ಯಕ್ತಿ. ಮಾ.10ರಂದು ಬೆಳಗ್ಗೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ತ್ಯಾಜ್ಯದ ಕಟ್ಟನ್ನು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕಬಕ ಗ್ರಾಪಂ ವ್ಯಾಪ್ತಿಯ ಕಬಕದಲ್ಲಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದರು. ಈ ದೃಶ್ಯವನ್ನು ತನ್ನ ಮೊಬೈಲ್ ಮೂಲಕ ಸೆರೆ ಹಿಡಿದ ಸ್ಥಳೀಯ ಪರಿಸರವಾಸಿಯೊಬ್ಬರು ಕಾರಿನ ನಂಬರ್ ಸಹಿತ ಫೋಟೋವನ್ನು ಕಬಕ ಗ್ರಾಮ ಪಂಚಾಯತ್‍ಗೆ ನೀಡಿದ್ದರು.

ಈ ಬಗ್ಗೆ ಪಂಚಾಯತ್ ವತಿಯಿಂದ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿತ್ತು. ಕಾರಿನ ನಂಬರ್ ಮತ್ತು ಫೋಟೋ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮಂಗಳವಾರ ಆರೋಪಿಯನ್ನು ಪತ್ತೆ ಮಾಡಿ ಹಾಜರು ಪಡಿಸಿದ್ದರು. ಪಂಚಾಯತ್ ಆರೋಪಿಗೆ 2 ಸಾವಿರ ರೂ.  ದಂಡ ವಿಧಿಸಿದೆ. ಈ ಹಿಂದೆಯೂ ಹಲವು ಬಾರಿ ಕಬಕ ಗ್ರಾಪಂ ವತಿಯಿಂದ ತ್ಯಾಜ್ಯ ಎಸೆಯುವವರಿಗೆ ಎಚ್ಚರಿಕೆ ನೀಡಲಾಗಿತ್ತು. ಇದೀಗ ಮೊದಲ ಬಾರಿಗೆ ದಂಡ ವಿಧಿಸಲಾಗಿದೆ.

ರಸ್ತೆಯಲ್ಲಿ ತ್ಯಾಜ್ಯ ಎಸೆತ: ಪಿಕಪ್ ಸಹಿತ ಓರ್ವ ಸೆರೆ

ಪುತ್ತೂರು: ಸಾರ್ವಜನಿಕ ರಸ್ತೆಯಲ್ಲಿ ತ್ಯಾಜ್ಯ ಎಸೆದು ಪರಿಸರ ಸ್ವಚ್ಚತೆಗೆ ದಕ್ಕೆ ತಂದ ಪ್ರಕರಣವನ್ನು ಪತ್ತೆ ಹಚ್ಚಿದ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ, ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬಾಜಾರು ನಿವಾಸಿ ಅಬ್ದುಲ್ ಖಾದರ್ ಬಂಧಿತ ಆರೋಪಿ. ಮಹೇಂದ್ರ ಪಿಕಪ್ ವಾಹನದಲ್ಲಿ ತ್ಯಾಜ್ಯವನ್ನು ತಂದು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಎಂಬಲ್ಲಿ ಎಸೆಯುತ್ತಿದ್ದ ಎನ್ನಲಾಗಿದ್ದು, ಈ ವೇಳೆ ಗಸ್ತು ನಿರತ ಠಾಣೆಯ ಎಎಸ್‍ಐ ರಾಮಚಂದ್ರ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News