ಪೊಲೀಸ್ ಬಲದೊಂದಿಗೆ ತ್ಯಾಜ್ಯ ಡಂಪ್ ಮಾಡಿದ ಅಧಿಕಾರಿಗಳು : ಆರೋಪ
ಬಂಟ್ವಾಳ, ಮಾ.18: ಭಾರೀ ವಿರೋಧದ ನಡುವೆಯು ಬಂಟ್ವಾಳ ಪುರಸಭೆಯ ಅಧಿಕಾರಿಗಳು ಪೊಲೀಸ್ ಬಲದಿಂದ ಸಜಿಪ ನಡು ಗ್ರಾಮದ ಕಂಚಿನಡ್ಕ ಪದವಿನ ಡಂಪಿಂಗ್ ಯಾರ್ಡ್‍ನಲ್ಲಿ ತ್ಯಾಜ್ಯವನ್ನು ಹಾಕಿರುವುದಾಗಿ ಆರೋಪಿಸಲಾಗಿದ್ದು, ಈ ವೇಳೆ ತ್ಯಾಜ್ಯದ ಲಾರಿಗೆ ಅಡ್ಡನಿಂತು ವಿರೋಧ ವ್ಯಕ್ತಪಡಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋದರು.
ಬುಧವಾರ ಮಧ್ಯಾಹ್ನದ ವೇಳೆಗೆ ಡಂಪಿಂಗ್ ಯಾರ್ಡ್‍ಗೆ ತ್ಯಾಜ್ಯ ಬರಲಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸ್ಥಳೀಯ ಮಹಿಳೆಯರು, ಯುವಕರು, ಮಕ್ಕಳು ಡಂಪಿಂಗ್ ಯಾರ್ಡ್‍ನ ಗೇಟ್ ಎದುರು ಧರಣಿ ಕುಳಿತುಕೊಂಡರು. ಸಂಜೆ 4 ಗಂಟೆಯ ಸುಮಾರಿಗೆ ತ್ಯಾಜ್ಯ ತುಂಬಿ ಬಂದ ಒಂದು ಟಿಪ್ಪರ್ ಲಾರಿ, ಎರಡು ಮಿನಿ ಟೆಂಪೊಗಳನ್ನು ಡಂಪಿಗ್ ಯಾರ್ಡ್ ಒಳಗೆ ಪ್ರವೇಶಿಸಲು ಧರಣಿ ನಿರತರು ಅವಕಾಶ ನೀಡಲಿಲ್ಲ. ಈ ವೇಳೆ ಧರಣಿಯ ನೇತೃತ್ವ ವಹಿಸಿದ್ದ ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ಮೂಲಕ ಮಾತುಕತೆ ನಡೆಸಿದ ಪೊಲೀಸರು ಮನವೊಲಿಸಲು ಪ್ರಯತ್ನಿಸಿದರು. ಪರಿಸರ, ಗಣಿ ಮತ್ತು ಭೂ ವಿಜ್ಞಾನ, ಆರೋಗ್ಯ ಇಲಾಖೆಗಳ 21 ನಿಂಬಂಧನೆಗಳನ್ನು ಪುರಸಭೆ ಪಾಲಿಸಿದ ಬಳಿಕವೇ ತ್ಯಾಜ್ಯ ಹಾಕಲು ಅವಕಾಶ ನೀಡಲಾಗುವುದು ಎಂದು ಪಟ್ಟು ಹಿಡಿದು ಸ್ಥಳದಿಂದ ತೆರಳಲು ನಿರಾಕರಿಸಿದರು.
ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮಂಗಳೂರು ಸಹಾಯಕ ಆಯುಕ್ತ ಭರವಸೆ ನೀಡಿದ್ದಾರೆ. ಈಗ ತ್ಯಾಜ್ಯ ಹಾಕಲು ಅವಕಾಶ ಕೊಡಿ. ಆ ಬಳಿಕ ನಿಮ್ಮ ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾಧಿಕಾರಿ ಬಳಿ ಮಾತುಕತೆ ನಡೆಸಿ. ಯಾವುದೇ ಸಮಸ್ಯೆಗಳಿದ್ದರೆ ಕಾನೂನು ಮೂಲಕ ಪರಿಹರಿಸಿ. ಸರಕಾರದ ಕೆಲಸವನ್ನು ದೈಹಿಕವಾಗಿ ತಡೆದರೆ ನಿಮ್ಮೆಲ್ಲರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಾಗುವುದು ಎಂದು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದರು.
ಒಂದು ದಶಕದಿಂದ ನಮ್ಮ ಬೇಡಿಕೆಯನ್ನು ಪುರಸಭೆ ಈಡೇರಿಸಿಲ್ಲ. ತ್ಯಾಜ್ಯ ಹಾಕಿದ ಬಳಿಕ ನಮ್ಮ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ಹೇಳುವ ಅಧಿಕಾರಿಗಳು ನಾಳೆ ವರ್ಗಾವಣೆಯಾಗಿ ಹೋದರೆ ನಮ್ಮ ಸಮಸ್ಯೆಗೆ ಯಾರು ಹೊಣೆ? ಮೊದಲು ತ್ಯಾಜ್ಯ ಹಾಕಿ ಮತ್ತೆ ಬೇಡಿಕೆ ಈಡೇರಿಸುವ ಬದಲು ಮೊದಲು ಬೇಡಿಕೆ ಈಡೇರಿಸಿ ಬಳಿಕ ತ್ಯಾಜ್ಯ ಹಾಕಲಿ ಎಂದು ಗ್ರಾಪಂ ಅಧ್ಯಕ್ಷ ನಾಸಿರ್ ವೃತ್ತ ನಿರೀಕ್ಷಕರಲ್ಲಿ ಮನವಿ ಮಾಡಿದರು.
ಸುಮಾರು ಅರ್ಧ ತಾಸಿಗೂ ಅಧಿಕ ಸಮಯ ಧರಣಿ ನಿರತರನ್ನು ಮನವೊಲಿಸಲು ಡಿವೈಎಸ್ಪಿ ವೆಲೈಂಟಿನ್ ಡಿಸೋಜ, ವೃತ್ತ ನಿರೀಕ್ಷ ಟಿ.ಡಿ.ನಾಗರಾಜ್, ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಕುಮಾರ್ ಪ್ರಯತ್ನಿಸಿದರು. ಆದರೆ ಪಟ್ಟು ಬಿಡದ ಧರಣಿ ನಿರತರು ಡಂಪಿಂಗ್ ಯಾರ್ಡ್ ಗೇಟ್‍ನಿಂದ ಕದಲಲಿಲ್ಲ. ಈ ವೇಳೆ ಪೊಲೀಸರು ಮತ್ತು ಧರಣಿ ನಿರತರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಬಲ ಪ್ರಯೋಗಿಸಿದ ಪೊಲೀಸರು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್, ಗ್ರಾಮ ಪಂಚಾಯತ್ ಸದಸ್ಯರ ಸಹಿತ 20ಕ್ಕೂ ಅಧಿಕ ಮಂದಿಯನ್ನು ಎಳೆದೊಯ್ದು ಪೊಲೀಸ್ ಬಸ್‍ನಲ್ಲಿ ಕೂಡಿ ಹಾಕುವ ಮೂಲಕ ವಶಕ್ಕೆ ಪಡೆದರು. ಬಳಿಕ ಅವರನ್ನು ಠಾಣೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲದೆ ಮಕ್ಕಳೊಂದಿಗೆ ಗೇಟ್‍ನಲ್ಲಿ ಧರಣಿ ಕುಳಿತಿದ್ದ ಮಹಿಳೆಯರನ್ನೂ ಬಲವಂತವಾಗಿ ಎಳೆದು ಚದುರಿಸಿದ ಪೊಲೀಸರು ತ್ಯಾಜ್ಯ ತುಂಬಿ ಲಾರಿ ಮತ್ತು ಮಿನಿ ಟೆಂಪೋಗಳನ್ನು ಡಂಪಿಂಗ್ ಯಾರ್ಡ್ ಒಳಗೆ ಪ್ರವೇಶಿಸುವಂತೆ ಮಾಡಿದರು ಎಂದು ತಿಳಿದುಬಂದಿದೆ.
ಮುಖ್ಯಾಧಿಕಾರಿಯ ಸುಳಿವಿಲ್ಲ, ಸ್ವಚ್ಛತಾ ಅಧಿಕಾರಿಗೆ ತರಾಟೆ
ತ್ಯಾಜ್ಯ ತುಂಬಿದ ಲಾರಿಯೊಂದಿಗೆ ಕಂಚಿನಡ್ಕಕ್ಕೆ ಬಂದ ಬಂಟ್ವಾಳ ಪುರಸಭೆಯ ಸ್ವಚ್ಛತಾ ಅಧಿಕಾರಿ, ತ್ಯಾಜ್ಯ ಹಾಕಲು ಬಿಡಿ ನಿಮ್ಮ ಬೇಡಿಕೆ ಯನ್ನು ಪರಿಹರಿಸಲಾಗುವುದು ಎಂದು ಧರಣಿ ನಿರತರಲ್ಲಿ ಹೇಳಿದರು. ಈ ವೇಳೆ ಅವರನ್ನು ತರಾಟೆಗೆ ತೆಗೆದುಕೊಂಡು ಧರಣಿ ನಿರತರು ಹತ್ತು ವರ್ಷಗಳಿಂದ ಈ ಮಾತನ್ನು ಹೇಳಿಕೊಂಡು ಬರುತ್ತಿದ್ದೀರಿ. ಇಂದಿನವರೆಗೆ ಪುರಸಭೆಗೆ ಅದು ಸಾಧ್ಯವಾಗಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಾಧಿಕಾರಿಯ ಸುಳಿವಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಮೊದಲು ಬೇಡಿಕೆ ಈಡೇರಿಸಿ ಮತ್ತೆ ತ್ಯಾಜ್ಯ ತನ್ನಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.