ಬೈಕಂಪಾಡಿ : ಶಾಲಾ ಶೌಚಾಲಯ ಸಂಕೀರ್ಣ ಉದ್ಘಾಟನೆ

Update: 2020-03-18 12:17 GMT

ಬೈಕಂಪಾಡಿ: ಅಂಗರಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೈಕಂಪಾಡಿ ಜುಮ್ಮಾ ಮಸೀದಿ ಸಮಿತಿ ನೆರವಿನಿಂದ  ನೂತನವಾಗಿ ನಿರ್ಮಾಣಗೊಂಡ ಶೌಚಾಲಯ ಸಂಕೀರ್ಣವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛಭಾರತದ ಆಶಯದಂತೆ, ದೇಶದ ಪ್ರತಿಯೊಬ್ಬ ನಾಗರೀಕನು ಶೌಚಾಲಯವನ್ನು ಬಳಸಿಕೊಳ್ಳಬೇಕು. ಕಳೆದ 5 ವರ್ಷಗಳಲ್ಲಿ ದೇಶದಲ್ಲಿ ಶೌಚಾಲಯ ನಿರ್ಮಾಣದ ಕ್ರಾಂತಿ ನಡೆದಿದೆ. ಪ್ರತಿಯೊಬ್ಬ ನಾಗರೀಕನು ಸ್ವಚ್ಛತಾ ಕಾರ್ಯದಲ್ಲಿ ಹೆಮ್ಮೆಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದಲ್ಲದೇ, ಅವುಗಳ ನಿರ್ವಹಣೆಯನ್ನೂ ಉತ್ತಮ ಗುಣಮಟ್ಟದಲ್ಲಿ ಕಾಪಾಡಬೇಕು. ಇಲ್ಲಿನ ಸರಕಾರಿ ಶಾಲೆಗೆ ಬೈಕಂಪಾಡಿ ಜುಮ್ಮಾ ಮಸೀದಿ ವತಿಯಿಂದ ಶೌಚಾಲಯ ಸಂಕೀರ್ಣ ನಿರ್ಮಾಣಗೊಂಡಿರುವುದು ಶ್ಲಾಘನೀಯವಾ ಗಿದೆ ಎಂದು ಅಬ್ದುಲ್ ಅಝೀಝ್ ಹೇಳಿದರು.

ಬೈಕಂಪಾಡಿ ಜುಮ್ಮಾ ಮಸೀದಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್ ಮಾತನಾಡಿ, ಶಾಲಾಭಿವೃದ್ಧಿ ಸಮಿತಿಯ ಬೇಡಿಕೆಯಂತೆ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿರುವ ಇಲ್ಲಿನ  ಶಾಲೆಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಇನ್ನಷ್ಟು ನೆರವು ನೀಡಲು ಸಿದ್ಧರಿರುವುದಾಗಿ ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಶೌಚಾಲಯ ಕೀಯನ್ನು ಹಸ್ತಾಂತರಿಸಲಾಯಿತು. ಬಿಜೆಪಿ ಮುಖಂಡ ಸಿರಾಜುದ್ದೀನ್,  ನ್ಯಾಯವಾದಿ ಮುಖ್ತಾರ್ ಅಹಮದ್, ಸ್ಥಳೀಯ ಮುಖಂಡರಾದ ಶಮೀರ್, ಮನ್ಸೂರು, ಬಾವಾ, ಇಲ್ಯಾಸ್, ಮತ್ತಿತರರು ಉಪಸ್ಥಿತರಿದ್ದರು. ಜುಮ್ಮಾ ಮಸೀದಿ ಕಾರ್ಯದರ್ಶಿ ಸೈದುದ್ದೀನ್  ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News