ಕೊರೋನಗೆ ಗೋಮೂತ್ರ ಮದ್ದು ಎಂಬುದು ಆಧಾರರಹಿತ: ಮಣಿಪಾಲ ಆಸ್ಪತ್ರೆಯ ಡಾ. ಕವಿತಾ
ಉಡುಪಿ, ಮಾ.18: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಕೊರೋನ ವೈರಸ್‌ಗೆ ಗೋಮೂತ್ರ ಮದ್ದು ಎಂಬ ಸುದ್ದಿಗಳು ಆಧಾರ ರಹಿತವಾಗಿದೆ. ಈ ಸಂಬಂಧ ಸರಕಾರದ ಆರೋಗ್ಯ ಇಲಾಖೆ, ವಿಶ್ವ ಆರೋಗ್ಯ ಸಂಸ್ಥೆ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನೀಡುವ ಪ್ರಕಟಣೆಗಳೇ ಅಧಿಕೃತವಾದುದು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸೋಂಕು ರೋಗ ವಿಭಾಗದ ಪ್ರೊಫೆಸರ್ ಡಾ.ಕವಿತಾ ಹೇಳಿದ್ದಾರೆ.
ಉಡುಪಿ ವಕೀಲರ ಸಂಘ ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ಬುಧವಾರ ಉಡುಪಿ ವಕೀಲರ ಸಂಘದ ಕಚೇರಿಯಲ್ಲಿ ಆಯೋಜಿಸಲಾದ ಕೊರೋನ ವೈರಸ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಕೊರೋನ ಭೀತಿಯಿಂದ ಅನಗತ್ಯವಾಗಿ ಸೋಂಕು ಪರೀಕ್ಷಿಸುವ ಕೆಲಸ ಮಾಡಬಾರದು. ಇದರಿಂದ ಪ್ರಯೋಗಾಲಯ, ಸಿಬ್ಬಂದಿಗಳ ಸಮಯ ಹಾಗೂ ಕಿಟ್‌ಗಳು ವ್ಯರ್ಥ ಆಗಲಿವೆ. ಅದೇ ರೀತಿ ಎಲ್ಲರು ಮಾಸ್ಕ್ ಧರಿಸುವ ಅಗತ್ಯ ಕೂಡ ಇರುವುದಿಲ್ಲ. ಯಾರಿಗೆ ಕೆಮ್ಮು, ಶೀತ ಇದೆಯೋ ಅವರು ಮಾತ್ರ ಧರಿಸಿದರೆ ಸಾಕಾಗುತ್ತದೆ. ಅಲ್ಲದೆ ಒಮ್ಮೆ ಬಳಕೆ ಮಾಡಿದ ಮಾಸ್ಕ್‌ನ್ನು ತೆಗೆದ ನಂತರ ಡಸ್ಟ್‌ಬಿನ್‌ಗೆ ಹಾಕಬಾರದು. ಯಾವುದೇ ಕಾರಣಕ್ಕೂ ಮಾಸ್ಕ್‌ನ ಮುಖದ ಭಾಗ ವನ್ನು ಕೈಯಿಂದ ಸ್ಪರ್ಶಿಸಬಾರದು ಎಂದರು.
ಈ ರೋಗ ಹರಡದಂತೆ ಮಾಡುವುದರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪಾತ್ರ ಕೂಡ ಬಹಳ ಮುಖ್ಯವಾಗಿದೆ. ರೋಗ ಲಕ್ಷ್ಮಣಗಳಿದ್ದವರು ಕಚೇರಿ ಕೆಲಸಕ್ಕೆ ಹೋಗದೆ, ಮನೆಯಲ್ಲಿಯೇ ಕೆಲಸ ನಿರ್ವಹಿಸಬೇಕು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆಗೆ ಒಳಪಡಿಸಬೇಕು. ಕೆಮ್ಮುವಾಗ ಟಿಶ್ಯು ಪೇಪರ್ ಗಳನ್ನು ಬಳಸಿದರೆ ಉತ್ತಮ. ನಂತರ ಬಳಸಿದ ಟಿಶ್ಯು ಪೇಪರನ್ನು ಡಸ್ಟ್ ಬಿನ್‌ಗೆ ಹಾಕಬೇಕು. ಎಲ್ಲ ರೀತಿಯ ಸ್ಯಾನಿಟೈಸರ್‌ಗಳನ್ನು ಬಳಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಅದರಲ್ಲಿ ಶೇ.70 ಆಲ್ಕೋಹಾಲ್ ಅಂಶ ಇರುವ ಸ್ಯಾನಿ ಟೈಸರ್‌ಗಳನ್ನು ಮಾತ್ರ ಬಳಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಮಾತನಾಡಿ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕೊರೋನ ವೈರಸ್ ಸಮಾಜದಲ್ಲಿ ಹರಡದಂತೆ ತಡೆಯಬಹುದಾಗಿದೆ. ದೇಶದ ಜನಸಂಖ್ಯೆಯ ಶೇ.1 ರಷ್ಟು ಜನರಿಗೆ ಈ ವೈರಸ್ ಹರಡಿದರೂ ಕೂಡ ಅಪಾಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸರಕಾರದ ಜೊತೆ ಕೈಜೋಡಿಸಿ ಸಹಕರಿಸಬೇಕು ಎಂದರು.
ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ವನಮಾಲ ಆನಂದ ರಾವ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ವಂದಿಸಿ ದರು. ವಕೀಲ ರಾಜಶೇಖರ ಶ್ಯಾಮರಾವ್ ಕಾರ್ಯಕ್ರಮ ನಿರೂಪಿಸಿದರು.