‘ಶಿಕ್ಷಣದಲ್ಲಿ ಧಾರ್ಮಿಕ, ಲೌಕಿಕ ಕಲ್ಪನೆ ಅನೈಸರ್ಗಿಕವಾದುದು’
ಮೂಡಬಿದರೆ, ಮಾ.18: ಶಿಕ್ಷಣದಲ್ಲಿ ಧಾರ್ಮಿಕ ಮತ್ತು ಲೌಕಿಕ ಎಂಬ ಕಲ್ಪನೆಯೇ ಅಇಸ್ಲಾಮಿಕ್ ಮತ್ತು ಅನೈಸರ್ಗಿಕವಾದುದು. ಭೌತಿಕತೆಯನ್ನು ದೇವನ ಇಚ್ಛೆಯಂತೆ ವ್ಯವಹರಿಸುವುದೇ ನಿಜವಾದ ಜ್ಞಾನವೂ, ಧರ್ಮವೂ ಮತ್ತು ಆರಾಧನೆಯೂ ಆಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಇದರ ರಾಜ್ಯ ಕಾರ್ಯದರ್ಶಿ ಮೌಲಾನಾ ವಹೀದುದ್ದೀನ್ ಮದನಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಮೂಡಬಿದಿರೆ ಅಲ್ ಇಸ್ಲಾಹ್ ವಸತಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಕ್ರಾಂತಿಕಾರೀ ನಾಯಕತ್ವವನ್ನು ಗಮನಿಸಿದಾಗ ಅಪಾರ ನಿರೀಕ್ಷೆಗಳು ಚಿಗುರುತ್ತಿವೆ ಎಂದರು.
ಕುವೈತ್ ಅವ್ಕಾಫ್‌ನ ಡಾ.ರಾಶಿದ್ ಅಲ್ಉಲಮಿ ಮಾತನಾಡಿ, ಅಧ್ಯಾಪಕರು ಕೃಷಿಕರಂತೆ, ಸರಳ ವಿಧಾನ ಮತ್ತು ಹಿಂಸೆಯಿಲ್ಲದೆ, ಸಹಾನು ಭೂತಿಯಿಂದ ಕಲಿಸಬೇಕಾಗಿದೆ. ಇಸ್ಲಾಮ್ನ ಬಗೆಗೆ ವ್ಯಾಪಿಸಿರುವ ತಪ್ಪು ಕಲ್ಪನೆಗಳನ್ನು ನೀಗಿಸುವಂತಹ ಪ್ರಮುಖ ಕಾರ್ಯವನ್ನು ಸಹನೆ ಮತ್ತು ಯುಕ್ತಿ ಪೂರ್ಣವಾಗಿ ಮಾಡಬೇಕು ಎಂದರು.
ಮಂಗಳೂರಿನ ಶಿಕ್ಷಣ ತಜ್ಞ ಕೆ.ಎಂ.ಶರೀಫ್ ಸಾಹೇಬ್ ಮಾತನಾಡಿ, ಚಾರಿತ್ರ್ಯ, ನೈತಿಕತೆ, ಮಾನವೀಯತೆ, ನಿಷ್ಠೆ ಮತ್ತು ನಿಸ್ವಾರ್ಥತೆಗಳಿಂದ ಪೂರ್ವ ಜರಂತೆ ನಡೆದರೆ ಸಮಾಜದಲ್ಲಿ ಸದ್ಯಅಗತ್ಯವಿರುವ ಬದಲಾವಣೆ ಸಾಧ್ಯ. ಸಮಾಜದಲ್ಲಿ ದಯಾ ಭಾವನೆಯೊಂದಿಗೆ ಯಾವುದೇ ಭೇದವಿಲ್ಲದೆ ಮಾನವರ ಸೇವೆ ಮಾಡಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಮಂಗಳೂರು ನಗರಾಧ್ಯಕ್ಷ ಕೆ.ಎಂ. ಅಶ್ರಫ್ ವಹಿಸಿದ್ದರು. ಬೆಂಗಳೂರು ಸಿಟಿ ಜಾಮೀಯ ಮಸೀದಿಯ ಇಮಾಮ್ ಖತೀಬ್ ಕಾರೀ ಮಕ್ಸೂದ್ ಇಮ್ರಾನ್ ರಶಾದಿ, ಮೌಲಾನಾ ಮುಹಮ್ಮದ್ ಇಲ್ಯಾಸ್ ಮದನಿ, ಮೌಲಾನಾ ಅಬ್ದುಲ್ ಮಲಿಕ್ ಉಮರಿ, ಮಡಿಕೇರಿ ಮಸ್ಜಿದ್‌ನ ಖತೀಬ್ ಉಮರ್ ಮೌಲ್ವಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಝಾಹಿದ್ ಕಾರ್ಕಳ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಹಾಗೂ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.