ಕೊರೋನವೈರಸ್‌ನ ಮುಂದಿನ ಕೇಂದ್ರಬಿಂದು ಭಾರತ?

Update: 2020-03-18 15:41 GMT

ಲಂಡನ್, ಮಾ. 18: ನೂತನ-ಕೊರೋನವೈರಸ್‌ನ ಮುಂದಿನ ಕೇಂದ್ರಬಿಂದು ಭಾರತವಾಗುವ ಸಾಧ್ಯತೆಯಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ. ಮಾರಕ ಸೋಂಕನ್ನು ನಿಯಂತ್ರಿಸುವಲ್ಲಿ ಏಶ್ಯದ ಇತರ ಭಾಗಗಳಲ್ಲಿ ಯಶಸ್ವಿಯಾಗಿರುವ ಕ್ರಮಗಳು ಭಾರತದಲ್ಲಿ ಯಶಸ್ವಿಯಾಗಲಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಈಗಾಗಲೇ 151 ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ ಮೂರು ಸಾವುಗಳು ಸಂಭವಿಸಿವೆ.

ಭಾರತವು ತನ್ನ ಗಡಿಗಳನ್ನು ಮುಚ್ಚುವ ಮೂಲಕ, ಒಳಬರುತ್ತಿರುವ ಪ್ರಯಾಣಿಕರನ್ನು ಪರೀಕ್ಷಿಸುವ ಮೂಲಕ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವ ಮೂಲಕ ಸಾಂಕ್ರಾಮಿಕವನ್ನು ನಿಯಂತ್ರಿಸಲು ಯತ್ನಿಸುತ್ತಿದೆ.

130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೊರೋನವೈರಸ್ ಪರೀಕ್ಷಾ ಸಾಮರ್ಥ್ಯವನ್ನು ಈಗಿನ ದಿನಕ್ಕೆ 500ರಿಂದ 8,000 ಮಾದರಿಗಳಿಗೆ ಹೆಚ್ಚಿಸಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಂಗಳವಾರ ಪ್ರಕಟಿಸಿದೆ. ಜನರ ನಡುವೆಯೇ ವೈರಸ್ ಹರಡಿರುವ ಪ್ರಕರಣಗಳು ಈವರೆಗೆ ವರದಿಯಾಗಿಲ್ಲ ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಹೇಳಿದ್ದಾರೆ.

ಆದರೆ, ಇಷ್ಟು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಸೋಂಕು ಹರಡಲು ತೆಗೆದುಕೊಂಡಿರುವ ಈ ಕ್ರಮ ಸಾಕಾಗುವುದಿಲ್ಲ ಎಂದು ಕೆಲವು ಪರಿಣತರು ಹೇಳುತ್ತಾರೆ. ಅತ್ಯಂತ ಹೆಚ್ಚು ಜನಸಾಂದ್ರತೆ ಮತ್ತು ಕಳಪೆ ಆರೋಗ್ಯ ಮೂಲಸೌಕರ್ಯ ಹೊಂದಿರುವ ನಗರಗಳಲ್ಲಿ ವ್ಯಾಪಾಕ ತಪಾಸಣೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂಥ ಕ್ರಮಗಳು ಸಾಧ್ಯವಾಗಲಾರದು ಎಂದು ಅವರು ಹೇಳುತ್ತಾರೆ.

ಎಪ್ರಿಲ್ 15ರ ವೇಳೆಗೆ ಸೋಂಕು 10 ಪಟ್ಟು ಹೆಚ್ಚು

 ಕೊರೋನವೈರಸ್ ಸೋಂಕು ಪೀಡಿತರ ಸಂಖ್ಯೆ ಈಗ ನಿಧಾನ ಗತಿಯಲ್ಲಿ ಏರುತ್ತಿದೆಯಾದರೂ, ಎಪ್ರಿಲ್ 15ರ ವೇಳೆಗೆ ಈ ಸಂಖ್ಯೆ 10 ಪಟ್ಟು ಹೆಚ್ಚುತ್ತದೆ ಎಂದು ವೈರಾಣು ಉನ್ನತ ಸಂಶೋಧನೆಗಾಗಿನ ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದ ಮಾಜಿ ಮುಖ್ಯಸ್ಥ ಡಾ. ಟಿ. ಜಾಕೋಬ್ ಜಾನ್ ಹೇಳುತ್ತಾರೆ.

‘‘ಇದು ನೀರ್ಗಲ್ಲು ಪ್ರವಾಹ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳುತ್ತಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News